ADVERTISEMENT

ತಗ್ಗಿದ ಭಾರತದ ಆರ್ಥಿಕ ಪ್ರಗತಿ ಮುನ್ನೋಟ

ಅಂತರರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ್‌ ವರದಿ

ಪಿಟಿಐ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ತಗ್ಗಿದ ಭಾರತದ ಆರ್ಥಿಕ ಪ್ರಗತಿ ಮುನ್ನೋಟ
ತಗ್ಗಿದ ಭಾರತದ ಆರ್ಥಿಕ ಪ್ರಗತಿ ಮುನ್ನೋಟ   

ವಾಷಿಂಗ್ಟನ್‌: ಪ್ರಸಕ್ತ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರದ ಮುನ್ನೋಟವನ್ನು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ತಗ್ಗಿಸಿದೆ.

ಈ ಹಿಂದಿನ ಎರಡು ಅಂದಾಜುಗಳಿಗೆ ಹೋಲಿಸಿದರೆ, ಆರ್ಥಿಕ ‍ಪ್ರಗತಿಯು ಶೇ 0.5ರಷ್ಟು ಕಡಿಮೆಯಾಗಿ ಶೇ 6.7ರಷ್ಟಾಗಲಿದೆ. ಇದು ಚೀನಾದ ಶೇ 6.8ಕ್ಕಿಂತ ಕಡಿಮೆ ಇರಲಿದೆ.

ಇದಕ್ಕೆ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಸಂದರ್ಭದಲ್ಲಿನ ಅನಿಶ್ಚಿತತೆ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 6.1ರಷ್ಟಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ತಿಳಿಸಿದ್ದವು.

ADVERTISEMENT

ನೋಟು ರದ್ದತಿಯ ವ್ಯತಿರಿಕ್ತ ಪರಿಣಾಮಗಳು ಮತ್ತು ಜಿಎಸ್‌ಟಿ ಜಾರಿ ಸಂದರ್ಭದಲ್ಲಿ ಎದುರಾದ ಅನಿಶ್ಚಿತತೆಯ ಕಾರಣಕ್ಕೆ ಭಾರತದ ಆರ್ಥಿಕ ಚಟುವಟಿಕೆಗಳ ವೇಗವು ಕುಂಠಿತಗೊಂಡಿದೆ.  ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ಆರ್ಥಿಕತೆ ಎನ್ನುವ ಹೆಗ್ಗಳಿಕೆಗೂ ಎರವಾಗಿದೆ ಎಂದು ಐಎಂಎಫ್‌, ತನ್ನ  ಜಾಗತಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

2018ರಲ್ಲಿ ಭಾರತವು ತ್ವರಿತವಾಗಿ ಬೆಳವಣಿಗೆ ಕಾಣುವ ಆರ್ಥಿಕತೆ ಎನ್ನುವ ಹೆಗ್ಗಳಿಕೆಗೆ ಮತ್ತೆ ಪಾತ್ರವಾಗಲಿದೆ ಎಂದೂ ವರದಿಯಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ.

1999 ರಿಂದ 2008ರ ಅವಧಿಯಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಸರಾಸರಿ ಶೇ 6.9ರಷ್ಟಿತ್ತು. 2015ರಲ್ಲಿ ಇದು ಶೇ 8ಕ್ಕೆ ತಲುಪಿತ್ತು. 2022ರಲ್ಲಿ ವೃದ್ಧಿ ಅಂದಾಜು ಶೇ 8.2ರಷ್ಟು ಇರಲಿದೆ.

ಈ ವರ್ಷದ ಚೀನಾದ ಆರ್ಥಿಕ ವೃದ್ಧಿ ದರವು ಭಾರತಕ್ಕಿಂತ ಕೊಂಚ ಮಟ್ಟಿಗೆ ಹೆಚ್ಚಿಗೆ ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಚೀನಾದ ಆರ್ಥಿಕ ವೃದ್ಧಿ ದರವನ್ನು ತನ್ನ ಹಿಂದಿನ ಅಂದಾಜಿಗಿಂತ ಶೇ 0.1ರಷ್ಟು ಹೆಚ್ಚಿಸಿರುವ ಐಎಂಎಫ್‌, ಶೇ 6.8ರಷ್ಟು ಇರಲಿದೆ ಎಂದು ಹೇಳಿದೆ.

ಈ ವಾರ ನಡೆಯಲಿರುವ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಮುಂಚೆ ಈ ವರದಿ ಬಿಡುಗಡೆ ಮಾಡಲಾಗಿದೆ.

ವಿಶ್ವಬ್ಯಾಂಕ್‌ ನಿರೀಕ್ಷೆ
ಸರ್ಕಾರದ ವೆಚ್ಚ ಹೆಚ್ಚಳದ ಜತೆಗೆ, ಖಾಸಗಿ ವಲಯದ ಬಂಡವಾಳ ಹೂಡಿಕೆಯಲ್ಲಿನ ಏರಿಕೆಯ ಫಲವಾಗಿ 2018ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇ 7.3ರಷ್ಟಾಗಲಿದೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ತಿಳಿಸಲಾಗಿದೆ.

ಭಾರತದ ಕುಂಠಿತ ಆರ್ಥಿಕ ಪ್ರಗತಿಯು  ದಕ್ಷಿಣ ಏಷ್ಯಾದ ಬೆಳವಣಿಗೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. 2015–16ರಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 8ರಷ್ಟಿತ್ತು. 2016ರಲ್ಲಿ ಇದು ಶೇ 7.1ಕ್ಕೆ ಇಳಿದಿತ್ತು. 2017ರ ಮೊದಲ ತ್ರೈಮಾಸಿಕದಲ್ಲಿ ಶೇ 5.7ರಷ್ಟಾಗಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ.

ಕುಂಠಿತ ಆರ್ಥಿಕ ಬೆಳವಣಿಗೆಯು 2018ರಲ್ಲಿ ಸ್ಥಿರಗೊಳ್ಳಲಿದೆ. ಜಿಡಿಪಿ ದರವು ಶೇ 7.0ರಷ್ಟಾಗಲಿದೆ. ನಂತರದ ವರ್ಷಗಳಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತ 2020ರಷ್ಟೊತ್ತಿಗೆ ಶೇ 7.4ರಷ್ಟಕ್ಕೆ ತಲುಪಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.