ನವದೆಹಲಿ (ಪಿಟಿಐ): ಕಳೆದ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ತಾಳೆ ಎಣ್ಣೆ ಉತ್ಪಾದನೆಯು ಮೂರು ಪಟ್ಟು ಹೆಚ್ಚಳವಾಗಿದ್ದು, 1.5 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.
2010-11ನೇ ಸಾಲಿನಲ್ಲಿ ತಾಳೆ ಎಣ್ಣೆ ಉತ್ಪಾದನೆ 50 ಸಾವಿರ ಟನ್‌ನಷ್ಟಿತ್ತು. ಹಾಗಾಗಿ ದೇಶಕ್ಕೆ ಅಗತ್ಯವಿರುವ ತಾಳೆ ಎಣ್ಣೆಯಲ್ಲಿ ಅರ್ಧದಷ್ಟನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. 2010-11ನೇ ತೈಲ ವರ್ಷದಲ್ಲಿ (ನವೆಂಬರ್‌ನಿಂದ ಅಕ್ಟೋಬರ್‌ವರೆಗೆ) 5.37 ದಶಲಕ್ಷ ಟನ್ ಕಚ್ಚಾ ತಾಳೆ ಎಣ್ಣೆ ಸೇರಿದಂತೆ ಒಟ್ಟು 8.37 ದಶಲಕ್ಷ ಟನ್‌ನಷ್ಟು ವಿವಿಧ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ಇಂಡೊನೇಷ್ಯಾ, ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿದೆ.
ಸದ್ಯ ಕಚ್ಚಾ ತಾಳೆ ಎಣ್ಣೆ ಆಮದಿಗೆ ಪೂರ್ಣ ಸುಂಕ ವಿನಾಯಿತಿ ಇದೆ. ಶುದ್ಧೀಕೃತ ಖಾದ್ಯ ತೈಲಕ್ಕೆ ಶೇ 7.5ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ.
ದೇಶದ ವಾರ್ಷಿಕ ತಲಾ ಖಾದ್ಯ ತೈಲ ಬಳಕೆಯು 2009-10ನೇ ಸಾಲಿನಲ್ಲಿ 14 ಕೆ.ಜಿ.ಯಷ್ಟಿತ್ತು. ಜಾಗತಿಕ ತಲಾ ಬಳಕೆ ಪ್ರಮಾಣವಾದ 23 ಕೆ.ಜಿ.ಗೆ ಹೋಲಿಸಿದರೆ ಭಾರತದಲ್ಲಿ ಬಳಕೆ ಕಡಿಮೆ ಇದೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಒಟ್ಟು ತಾಳೆ ಎಣ್ಣೆ ಉತ್ಪಾದನೆಯನ್ನು 2.5 ಲಕ್ಷ ಟನ್‌ನಿಂದ 3 ಲಕ್ಷ ಟನ್‌ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.