ADVERTISEMENT

ತೈಲ ಬೆಲೆ ಇಳಿಕೆಗೆ ಆಗ್ರಹ: ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 19:30 IST
Last Updated 3 ಏಪ್ರಿಲ್ 2018, 19:30 IST
ಕೃಷಿ ಸಚಿವ ಕೃಷ್ಣ ಬೈರೇಗೌಡ
ಕೃಷಿ ಸಚಿವ ಕೃಷ್ಣ ಬೈರೇಗೌಡ   

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಿಲ್ಲ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ದೂರಿದರು.

‘ಕಚ್ಚಾ ಬೆಲೆ ಹೆಚ್ಚಳವಾಗಿರುವುದೇ ಪೆಟ್ರೋಲ್ ಮತ್ತು ಡೀಸೆಲ್‌ ದರ ಹೆಚ್ಚಳವಾಗಲು ಕಾರಣವೆಂದು ಬಿಂಬಿಸಲಾಗುತ್ತಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.

‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ವಿಧಿಸುತ್ತಿರುವ ತೆರಿಗೆ ತುಂಬಾ ಕಡಿಮೆ. ಅಲ್ಲದೆ, ರಾಜ್ಯದಲ್ಲಿ ಈಗಾಗಲೇ ಎರಡು ಬಾರಿ ತೆರಿಗೆ ಕಡಿತ ಮಾಡಲಾಗಿದೆ’ ಎಂದರು.

ADVERTISEMENT

‘ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವ ಕೇಂದ್ರ ಸರ್ಕಾರ, ಪದೇ ಪದೇ ತೆರಿಗೆ ಹೆಚ್ಚಿಸಿದ ಕಾರಣ ತೈಲ ದರ ಹೆಚ್ಚಿದೆ. ಆದಾಯ ಕ್ರೋಡೀಕರಣ ಉದ್ದೇಶದಿಂದ ಜನರ ಮೇಲೆ ಕೇಂದ್ರ ಸರ್ಕಾರ ಪ್ರಹಾರ ನಡೆಸುತ್ತಿದೆ’ ಎಂದೂ ಆರೋಪಿಸಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 122 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 80, ಡೀಸೆಲ್ ಬೆಲೆ ₹ 60 ಇತ್ತು. ಈಗ ಕಚ್ಚಾ ತೈಲದ ಬೆಲೆ 65 ಡಾಲರ್‌ಗೆ ಇದೆ. ಆದರೆ, ಪೆಟ್ರೋಲ್‌ ದರ ₹ 75, ಡೀಸೆಲ್ ಬೆಲೆ ₹ 65 ಇದೆ. ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ ಒಂಬತ್ತು ಬಾರಿ ತೈಲ ಮೇಲಿನ ತೆರಿಗೆ ಹೆಚ್ಚಿಸಿದೆ. ದರ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ಅಚ್ಛೇ ದಿನ್ ಬಂದಿದೆಯೇ ಹೊರತು ಜನರಿಗೆ ಅಲ್ಲ’ ಎಂದು ಲೇವಡಿ ಮಾಡಿದರು.

‘ಅನಾವಶ್ಯಕವಾಗಿ ವೆಚ್ಚ ಮಾಡಿರುವ ಕೇಂದ್ರ, ಅದನ್ನು ತುಂಬಲು ಜನರ ಕಿಸೆಗೆ ಕೈಹಾಕಿದೆ. ನೋಟ್ ನಿಷೇಧದಿಂದ ಈಗಾಗಲೇ ಜನ ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ತೆರಿಗೆ ವಿಧಿಸುತ್ತಿರುವುದು ಖಂಡನೀಯ. ಇದು ಅರ್ಥ ವ್ಯವಸ್ಥೆಗೆ ಮಾರಕ’ ಎಂದೂ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.