ADVERTISEMENT

ತೊಗರಿಯತ್ತ ರೈತರ ಚಿತ್ತ; ದಾಖಲೆ ಬಿತ್ತನೆ

ವಿಜಯಪುರ ಜಿಲ್ಲೆಗೆ 2ನೇ ಸ್ಥಾನ * ಕಡಿಮೆಯಾದ ಜೋಳ, ಕಡಲೆ ಬಿತ್ತನೆ ಪ್ರದೇಶ

ಡಿ.ಬಿ, ನಾಗರಾಜ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
ತಾಂಬಾ ಗ್ರಾಮದ ಬಳಿ ನಳನಳಿಸುತ್ತಿರುವ ತೊಗರಿ ಬೆಳೆ – ಪ್ರಜಾವಾಣಿ ಚಿತ್ರ
ತಾಂಬಾ ಗ್ರಾಮದ ಬಳಿ ನಳನಳಿಸುತ್ತಿರುವ ತೊಗರಿ ಬೆಳೆ – ಪ್ರಜಾವಾಣಿ ಚಿತ್ರ   

ವಿಜಯಪುರ: ಬಿಳಿ ಜೋಳಕ್ಕೆ ಹೆಸರಾಗಿರುವ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದ ತೊಗರಿ ಬಿತ್ತನೆಯಾಗಿದೆ. ಇದೇ ಮೊದಲ ಬಾರಿಗೆ 3.14 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದ್ದು, ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದುಪ್ಪಟ್ಟುಗೊಂಡಿದೆ ಎಂಬುದನ್ನು ಜಿಲ್ಲಾ ಕೃಷಿ ಇಲಾಖೆಯ ಅಂಕಿ–ಅಂಶಗಳು ದೃಢಪಡಿಸಿವೆ.

ಶೇ 40 ಭಾಗ ಮುಂಗಾರು; ಉಳಿದ ಶೇ 60 ಭಾಗ ಹಿಂಗಾರು. ಇದು ಜಿಲ್ಲೆಯಲ್ಲಿ ಹಿಂದಿನ ವರ್ಷದವರೆಗಿದ್ದ ಕೃಷಿ ಚಟುವಟಿಕೆಯ ಚಿತ್ರಣ. ಆದರೆ ಈ ಪ್ರಮಾಣದಲ್ಲಿ ಈ ವರ್ಷ ಸಾಕಷ್ಟು ವ್ಯತ್ಯಾಸವಾಗಲಿದೆ. ಮುಂಗಾರಿನಲ್ಲಿ ಸೂರ್ಯಕಾಂತಿ ಬಿತ್ತನೆಯಾಗುತ್ತಿದ್ದ ಪ್ರದೇಶವು ಕಳೆದ ಐದು ವರ್ಷಗಳಲ್ಲಿ ಕಡಿಮೆಯಾಗಿದೆ. ಮುಂಗಾರು–ಹಿಂಗಾರಿಗೆ ಮೀಸಲಿದ್ದ ಪ್ರದೇಶವನ್ನೆಲ್ಲ ವ್ಯಾಪಕ ಪ್ರಮಾಣದಲ್ಲಿ ತೊಗರಿ ಆವರಿಸಿರುವುದರಿಂದ ಜಿಲ್ಲೆಯ ಕೃಷಿ ಚಿತ್ರಣ ಬದಲಾಗಲಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚಳಕ್ಕೆ ಪ್ರಮುಖ ಕಾರಣ: ಪ್ರತಿ ವರ್ಷ ಸೂರ್ಯಕಾಂತಿ ಬೆಳೆಯನ್ನು ಬಾಧಿಸುತ್ತಿದ್ದ ಬೂದಿ ರೋಗ, ನಂಜಾಣು ರೋಗಕ್ಕೆ ಹೈರಾಣಾಗಿದ್ದ ಜಿಲ್ಲೆಯ ಜನತೆ ಪರ್ಯಾಯ ಬೆಳೆಯಾಗಿ ತೊಗರಿಯತ್ತ ತಮ್ಮ ಚಿತ್ತ ಹರಿಸಿದರು. ಇದೇ ಸಂದರ್ಭ ನೂತನವಾಗಿ ಆವಿಷ್ಕಾರಗೊಂಡ ರೋಗ ನಿರೋಧಕ ತಳಿ ‘ಟಿಎಸ್‌ಆರ್‌–3’ ಬಿತ್ತನೆ ಬೀಜ ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ.

ಈ ತಳಿಗೆ ಹೆಚ್ಚು ರೋಗ ನಿರೋಧಕ ಶಕ್ತಿ ಇದ್ದು,  ಬೆಳೆಗೆ ತಗುಲುವ ಗೊಡ್ಡು ರೋಗ, ಗಿಡ ಒಣಗುವ ಮೆತೆ ರೋಗಕ್ಕೆ ಇದು ತುತ್ತಾಗುವುದು ಕಡಿಮೆ. ಇದರ ಜೊತೆಗೆ ಇದು ಮಧ್ಯಮ ಅವಧಿ ತಳಿಯಾಗಿದ್ದು, 140ರಿಂದ–145 ದಿನದೊಳಗೆ ಫಸಲು ಕೈಸೇರುತ್ತದೆ.

ಜಿಲ್ಲೆಯ ಹವಾಗುಣ, ಮಳೆ ಸುರಿಯುವ ಪ್ರಮಾಣಕ್ಕೆ ಹೊಂದಿಕೊಳ್ಳುವ ಗುಣ ಇದಕ್ಕಿದ್ದು, ಹೆಚ್ಚು ಇಳುವರಿಯನ್ನೂ ಪಡೆಯಬಹುದು. ಎಂತಹ ದುರ್ಭರ ಸ್ಥಿತಿಯಲ್ಲೂ ಎಕರೆಗೆ ಕನಿಷ್ಠ 4–5 ಕ್ವಿಂಟಲ್‌ ಫಸಲು ಸಿಗಲಿದೆ.

ಮಾರುಕಟ್ಟೆಯಲ್ಲೂ ತೊಗರಿಯ ದರ ಕ್ವಿಂಟಲ್‌ಗೆ ಕನಿಷ್ಠ ₹ 10 ಸಾವಿರದ ಆಸುಪಾಸಿದೆ. ಇದರ ಮೌಲ್ಯ ಶೇ 40ರಷ್ಟು ಕುಸಿದರೂ ರೈತರಿಗೆ ನಷ್ಟವಾಗುವುದಿಲ್ಲ. ಈ ಎಲ್ಲ ಅಂಶಗಳು ಜಿಲ್ಲೆಯಲ್ಲಿ ತೊಗರಿ ಬಿತ್ತನೆ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸಿವೆ.

ರಾಜ್ಯದಲ್ಲೇ ಅತ್ಯಂತ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯಪುರಕ್ಕೆ  ಎರಡನೇ ಸ್ಥಾನ ದೊರೆತಿದ್ದು, ಕಲಬುರ್ಗಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಡಾ. ಮಂಜುನಾಥ್ ಅವರು ಮಾಹಿತಿ ನೀಡಿದರು.

ತೊಗರಿ ಜಿಲ್ಲೆಯ ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕ ಬೆಳೆಯಾಗಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಈಗಾಗಲೇ ಬಿತ್ತನೆಯಾಗಿರುವುದರಿಂದ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಬಿಳಿ ಜೋಳ, ಕಡಲೆ ಬೆಳೆಯುವ ಪ್ರದೇಶ ಕನಿಷ್ಠ 80ರಿಂದ 1 ಲಕ್ಷ ಹೆಕ್ಟೇರ್‌ನಷ್ಟು ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.