ADVERTISEMENT

ತೊಗರಿ ಬೆಲೆ ಇನ್ನಷ್ಟು ಕುಸಿಯುವ ಆತಂಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ತೊಗರಿ ಬೆಲೆ ಇನ್ನಷ್ಟು ಕುಸಿಯುವ ಆತಂಕ
ತೊಗರಿ ಬೆಲೆ ಇನ್ನಷ್ಟು ಕುಸಿಯುವ ಆತಂಕ   

ಕಲಬುರ್ಗಿ: ಜಿಲ್ಲೆಯಲ್ಲಿ ಒಂದು ಕ್ವಿಂಟಲ್‌ ತೊಗರಿ ₹ 3,800 ರಿಂದ ₹ 4,000 ರವರೆಗೆ ಮಾರಾಟವಾಗುತ್ತಿದ್ದು, ತೊಗರಿಬೇಳೆ ದರ ₹6,000 ರಿಂದ ₹ 7,000 ಇದೆ. ದರ ಇನ್ನಷ್ಟು ಕುಸಿಯುವ ಸಂಭವ ಇದೆ.

ಕಳೆದ ವರ್ಷ ತೊಗರಿಗೆ ಉತ್ತಮ ದರ ಬಂದಿತ್ತು. ಹೀಗಾಗಿ ಈ ಸಲವೂ ರೈತರು ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೆಳೆದಿದ್ದರು. ದರ ಕುಸಿತ ಹಾಗೂ ಬೆಳೆದ ಎಲ್ಲ ತೊಗರಿ ಖರೀದಿಯಾಗದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

2015ರ ಅಕ್ಟೋಬರ್‌ ತಿಂಗಳಲ್ಲಿ ತೊಗರಿ ಪ್ರತಿ ಕ್ವಿಂಟಲ್‌ಗೆ ₹11,760 ಬೆಲೆಗೆ ಮಾರಾಟವಾದರೆ, ಕಳೆದ ವರ್ಷ ₹10 ಸಾವಿರಕ್ಕೆ ಮಾರಾಟವಾಗಿತ್ತು.
ಕಲಬುರ್ಗಿ ಎಪಿಎಂಸಿಯಲ್ಲಿ ಶುಕ್ರವಾರ ಪ್ರತಿ ಕ್ವಿಂಟಲ್‌ಗೆ ಹಳೆ ತೊಗರಿ ಗರಿಷ್ಠ  ₹3,750ಕ್ಕೆ ಹಾಗೂ ಹೊಸ ತೊಗರಿ ಗರಿಷ್ಠ ₹3,838 ಮಾರಾಟವಾಯಿತು. ಕನಿಷ್ಠ ಬೆಲೆ ₹3,000 ಇತ್ತು.

‘ಕಳೆದ ವರ್ಷದ ಲಾಭದ ನಿರೀಕ್ಷೆಯಲ್ಲೇ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೆಳೆದಿದ್ದು ಮುಳುವಾಗಿದೆ. ಕೇಂದ್ರ ಸರ್ಕಾರವು ತೊಗರಿ ಸಂಗ್ರಹಿಸಿ ಇಟ್ಟುಕೊಂಡಿದೆ. ತೊಗರಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ದರದಲ್ಲಿ ಬದಲಾವಣೆ ಆಗುತ್ತಿಲ್ಲ’ ಎಂದು ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರ ತಿಳಿಸಿದರು.

‘ವಿದೇಶದಿಂದ ಆಮದಾಗುವ ಕ್ವಿಂಟಲ್‌ ಬೇಳೆಕಾಳಿಗೆ ಸರ್ಕಾರ ₹10ಸಾವಿರವರೆಗೆ ಖರ್ಚು ಮಾಡುತ್ತಿದೆ. ಅದೇ ದರ ರೈತರಿಗೆ ನೀಡಿ ಪ್ರೋತ್ಸಾಹಿಸಿದರೆ, ಅವರ ಸಂಕಷ್ಟಗಳು ನಿವಾರಣೆಯಾಗುತ್ತವೆ’ ಎಂದು ರೈತ ಮುಖಂಡ ಮಾರುತಿ ಮಾನ್ಪಡೆ ಹೇಳುತ್ತಾರೆ.
*
ಶೇ 90ರಷ್ಟು ತೊಗರಿ ಖರೀದಿಯಾಗಿದೆ. ಆದರೆ, ರೈತರು ತೊಗರಿಯನ್ನು ದೀರ್ಘಕಾಲದವರೆಗೆ ಕಾಯ್ದಿಡುವ ಸ್ಥಿತಿಯಲ್ಲಿ ಇಲ್ಲ.
ಭಾಗಣ್ಣಗೌಡ ಪಾಟೀಲ ಸಂಕನೂರ,
ತೊಗರಿ ಮಂಡಳಿ ಅಧ್ಯಕ್ಷ
*
ಸಾಲ ತೀರಿಸಲು ರೈತರು ತರಾತುರಿಯಲ್ಲಿ ತೊಗರಿ ಮಾರುತ್ತಿದ್ದಾರೆ. ಗ್ರಾಮ ಪಂಚಾಯಿತಿಗೆ ಒಂದರಂತೆ ಖರೀದಿ ಕೇಂದ್ರ ತೆರೆಯಬೇಕು.
ಮಾರುತಿ ಮಾನ್ಪಡೆ,
ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.