ADVERTISEMENT

ದೀಪಾವಳಿಗೆ ಚಿನ್ನ ಬೆಲೆ ₹ 34 ಸಾವಿರಕ್ಕೆ?

ಪಿಟಿಐ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ಮುಂಬೈ: ದೀಪಾವಳಿ ವೇಳೆಗೆ ಚಿನ್ನದ ಧಾರಣೆ 10 ಗ್ರಾಂಗೆ ₹ 34 ಸಾವಿರಕ್ಕೆ ಏರಿಕೆಯಾಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

‘ರೂಪಾಯಿ ಮೌಲ್ಯ ಇಳಿಕೆ ಹಾಗೂ ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಹಳದಿ ಲೋಹದ ಬೆಲೆಯಲ್ಲಿ ಏರಿಕೆಯಾಗಲಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್‌ಗೆ 1,260 ರಿಂದ 1,400 ಡಾಲರ್‌ಗಳಿಗೆ ತಲುಪಿದೆ’ ಎಂದು ಕಾಮನ್‌ಟ್ರೆಂಡ್ಸ್‌ ಸಂಸ್ಥೆಯ ವಿಪತ್ತು ನಿರ್ವಹಣಾ ನಿರ್ದೇಶಕ ಜ್ಞಾನಶೇಖರ ತ್ಯಾಗರಾಜನ್‌ ತಿಳಿಸಿದ್ದಾರೆ.

ADVERTISEMENT

ಬಡ್ಡಿದರ ಕಡಿತದಿಂದ ಡಾಲರ್‌  ವೆಚ್ಚದಲ್ಲಿ ಏರಿಕೆಯಾಗಲಿದ್ದು ಡಾಲರ್‌ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಹೀಗಾಗಿ ಎರಡನೇ ತ್ರೈಮಾಸಿಕದಲ್ಲಿ ಹೂಡಿಕೆದಾರರು ಚಿನ್ನದ ಖರೀದಿಗೆ ಆಸಕ್ತಿ ತೋರಬಹುದು ಎಂದು ಅವರು ಹೇಳಿದ್ದಾರೆ.

ಜೂನ್‌ 8ರಂದು ಭಾರತದಲ್ಲಿ ಚಿನ್ನದ ಧಾರಣೆ 10 ಗ್ರಾಂಗೆ ₹ 31,010ರಂತೆ ವಹಿವಾಟು ನಡೆಸಿತ್ತು. ನ್ಯೂಯಾರ್ಕ್‌ನಲ್ಲಿ ಒಂದು ಔನ್ಸ್‌ಗೆ 1,302.70 ಡಾಲರ್‌ನಂತೆ ವಹಿವಾಟಾಗಿತ್ತು.

ದೀಪಾವಳಿ ಸಂದರ್ಭದಲ್ಲಿ 10 ಗ್ರಾಂ ಚಿನ್ನ ₹ 31,500 ರಿಂದ ₹ 31,800ರ ಆಸುಪಾಸಿನಲ್ಲಿ ವಹಿವಾಟು ನಡೆಸಬಹುದು ಎಂದು ಕಮಾಡಿಟಿ ಆ್ಯಂಡ್‌ ಕರೆನ್ಸಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಪ್ರೀತಿ ರಥಿ ಹೇಳಿದ್ದಾರೆ.

**

ಸದ್ಯಕ್ಕೆ ಹೂಡಿಕೆಗೆ ಬೇಡಿಕೆ ಇಲ್ಲ

‘ಹೂಡಿಕೆ ಆಯ್ಕೆಯಾಗಿ ಚಿನ್ನಕ್ಕೆ ಸದ್ಯ ಬೇಡಿಕೆ ಇಲ್ಲ. ಷೇರುಪೇಟೆಯಿಂದ ಉತ್ತಮ ಗಳಿಕೆ ಬರುತ್ತಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಕಡಿಮೆ ಮಾಡಿದ್ದಾರೆ’ ಎಂದು ತ್ಯಾಗರಾಜನ್ ಹೇಳಿದ್ದಾರೆ.

‘ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಏರಿಕೆ ಮಾಡಿರುವುದರಿಂದ ಹೂಡಿಕೆಯ ಒಂದಷ್ಟು ಭಾಗ ಚಿನ್ನದ ಖರೀದಿಗೆ ಬಳಸುವ ನಿರೀಕ್ಷೆ ಇದೆ.

‘ಚಿನ್ನಾಭರಣ ಬೇಡಿಕೆಯೂ ಮಾರುಕಟ್ಟೆ ನಿರೀಕ್ಷೆಯಂತೆ ಇಲ್ಲ. ಗ್ರಾಹಕರ ಖರೀದಿ ಮನೋಧರ್ಮದಲ್ಲಿಯೂ ಬದಲಾವಣೆಗಳಾಗುತ್ತಿವೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.