ADVERTISEMENT

ದೊಡ್ಡಣ್ಣನ ಸಂಕಟ

​ಕೇಶವ ಜಿ.ಝಿಂಗಾಡೆ
Published 16 ಆಗಸ್ಟ್ 2011, 19:30 IST
Last Updated 16 ಆಗಸ್ಟ್ 2011, 19:30 IST
ದೊಡ್ಡಣ್ಣನ ಸಂಕಟ
ದೊಡ್ಡಣ್ಣನ ಸಂಕಟ   

`ಅಮೆರಿಕ ಸೀನಿದರೆ, ಇಡೀ ವಿಶ್ವಕ್ಕೆ ಶೀತ ಅಮರಿಕೊಳ್ಳುತ್ತದೆ~ ಎನ್ನುವ ನಾಣ್ಣುಡಿ ಈಗ ಮತ್ತೊಮ್ಮೆ ನಿಜವಾಗಿದೆ. ಸ್ಟ್ಯಾಂಡರ್ಡ್ ಆಂಡ್ ಪೂರ್ಸ್‌, ಅಮೆರಿಕವು ದೀರ್ಘಕಾಲದಿಂದ ಕಾಯ್ದುಕೊಂಡು ಬಂದಿದ್ದ ಅತ್ಯುನ್ನತ ಮಟ್ಟದ ಸಾಲ ಮರು ಪಾವತಿ ಸಾಮರ್ಥ್ಯವನ್ನು `ಎಎಎ~ ಮಟ್ಟದಿಂದ `ಎಎ+~ ಮಟ್ಟಣಕ್ಕೆ ಇಳಿಸಿರುವುದು ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ.

ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಉಂಟಾಗುವಂತೆ, ಇಂತಹ ಹಣಕಾಸು ಬಿಕ್ಕಟ್ಟಿನ ಸಂದರ್ಭಗಳಲ್ಲೂ ಜಾಗತಿಕ ಹಣಕಾಸು ಪೇಟೆಯಲ್ಲಿ `ನಂತರದ ಆಘಾತ~ಗಳು ಕಂಡು ಬರುತ್ತಲೇ ಇವೆ.

ಸದ್ಯಕ್ಕೆ ಈ ಆಘಾತಗಳು ಹೂಡಿಕೆದಾರರು, ಸರ್ಕಾರಿ ಮುಖ್ಯಸ್ಥರು, ಜನಸಾಮಾನ್ಯರಲ್ಲಿಯೂ ದಿಗಿಲು ಮೂಡಿಸಿ, ಭವಿಷ್ಯದ ಬಗ್ಗೆ ಕಳವಳಕ್ಕೆ ಎಡೆ ಮಾಡಿಕೊಟ್ಟಿವೆ. ಇಂತಹ ಆಘಾತಗಳು ನಂತರದ ದಿನಗಳಲ್ಲಿ ಅರ್ಥ ವ್ಯವಸ್ಥೆಯ ಸುಸ್ಥಿರ ಚೇತರಿಕೆ ಮತ್ತು ಷೇರು ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆಗೆ ಕಾರಣವಾಗುತ್ತವೆ ಎಂದೂ ಹೇಳಲಾಗುತ್ತಿದೆ.

ಸರ್ಕಾರದ ಸಾಲದ ಮಿತಿ ಹೆಚ್ಚಿಸಲು ನಡೆದ ರಾಜಕೀಯ ಜಟಾಪಟಿ, ಸಾಲ ಮರು ಪಾವತಿ ಸಾಮರ್ಥ್ಯ ಇಳಿಕೆ, ಯೂರೋಪ್ ಬಿಕ್ಕಟ್ಟು ವಿಸ್ತರಣೆ, ಷೇರು ಬೆಲೆಗಳ ತೀವ್ರ ಇಳಿಕೆ ಮತ್ತಿತರ ಆತಂಕಕಾರಿ ಘಟನಾವಳಿಗಳ ಹಿಂದೆ ಅಮೆರಿಕನ್ನರ `ಸಾಲದ ವ್ಯಸನ~ವೇ ಮುಖ್ಯ ಖಳನಾಯಕನ ಪಾತ್ರ ವಹಿಸಿದೆ.

ರಾಷ್ಟ್ರೀಯ ಸಾಲದ ಹೊರೆಯು ಒಟ್ಟು ಆಂತರಿಕ ಉತ್ಪನ್ನದ ಶೇ 100ರಷ್ಟು ಅಗಾಧ ಪ್ರಮಾಣದಲ್ಲಿ ಬೆಳೆದಿದೆ. ಸಾಲದ ಮಿತಿ ಹೆಚ್ಚಿಸಿದ್ದರೂ, ಅದು ಸರ್ಕಾರದ ಮೂಲ ಸಮಸ್ಯೆ ಪರಿಹರಿಸಲಾರದು. 2012ರ ಹೊತ್ತಿಗೆ  ವಿತ್ತೀಯ ಕೊರತೆಯು 1000 ಶತಕೋಟಿ (ರೂ 45,00,000 ಕೋಟಿ) ಡಾಲರ್‌ಗಳಷ್ಟಾಗಲಿದೆ.  ಸಾಲ ಮರು ಪಾವತಿ ಸಾಮರ್ಥ್ಯ ಹಿಂದಿನ (ಎಎಎ) ಮಟ್ಟಕ್ಕೆ ಬರಬೇಕಾದರೆ ಸರ್ಕಾರದ ವೆಚ್ಚವು 2.5 ಲಕ್ಷ ಕೋಟಿ ಡಾಲರ್ ಬದಲಿಗೆ 4 ಲಕ್ಷ ಕೋಟಿ ಡಾಲರ್‌ಗಳಿಗೆ ಏರಬೇಕು ಎನ್ನುವುದು `ಎಸ್‌ಎಪಿ~ಯ ನಿರೀಕ್ಷೆಯಾಗಿದೆ.

ಹೊಸ ಪರಿಭಾಷೆ
ವಿಶ್ವದ ಅತಿದೊಡ್ಡ ಅರ್ಥ ವ್ಯವಸ್ಥೆ ಮತ್ತೊಮ್ಮೆ ಸಂಕಷ್ಟದ ಸುಳಿಗೆ ಸಿಲುಕಿರುವಂತೆ ಕೆಲ ಹೊಸ ಪರಿಭಾಷೆಗಳೂ ಹುಟ್ಟಿಕೊಂಡಿವೆ.

ಕ್ರೆಡಿಟ್ ರೇಟಿಂಗ್ (ಸಾಲದ ಮೌಲ್ಯಮಾಪನ) :
 ಸಾಲ ಪಡೆಯುವ ಉದ್ದಿಮೆ ಸಂಸ್ಥೆ ಅಥವಾ ಸರ್ಕಾರದ ಸಾಲದ ವೈಶಿಷ್ಟ್ಯಗಳ ಮಾನದಂಡ ಇದಾಗಿರುತ್ತದೆ. ಈ ಸಾಲ ಮರುಪಾವತಿ ಸಾಮರ್ಥ್ಯ ತಗ್ಗಿಸುವುದೆಂದರೆ, ಅದರ (ಸಂಸ್ಥೆ / ಸರ್ಕಾರ) ಪಾಲಿಗೆ ಸಾಲ ಪಡೆಯುವುದು ತುಟ್ಟಿಯಾಗಿ ಮತ್ತು ಹೆಚ್ಚು ಕಷ್ಟಕರವಾಗಿ ಪರಿಣಮಿಸುತ್ತದೆ.
 
ಒಂದು ರಾಷ್ಟ್ರಕ್ಕೆ ಈ ಮೌಲ್ಯಮಾಪನ ಅನ್ವಯಿಸಿದರೆ ಅದನ್ನು ಸರ್ವಶ್ರೇಷ್ಠ (sovereign) ಮಾಪನ ಎನ್ನುತ್ತಾರೆ. ಇದರಿಂದ ದೇಶವೊಂದು ವಿದೇಶಗಳಿಂದ ಪಡೆಯುವ ಸಾಲಕ್ಕೆ ಹೆಚ್ಚಿನ ಬಡ್ಡಿ ದರ ಪಾವತಿಸಬೇಕಾಗುತ್ತದೆ. ಕೆಲ ಸಾಲಗಾರರು ಸಾಲ ನೀಡಲೂ ಹಿಂದೇಟು ಹಾಕಬಹುದು.

ಅಮೆರಿಕವು 1917ರಲ್ಲಿ ಮೊದಲ ಬಾರಿಗೆ ಅತ್ಯಂತ ಉನ್ನತ ಮಟ್ಟದ ಮೌಲ್ಯಮಾಪನವನ್ನು (AAA) ಪಡೆದಿತ್ತು.  ಅದು ಈಗ ಅಅ+ ಗೆ ಕುಸಿದಿದೆ. ಸಾಲ ಮರುಪಾವತಿ ಸಾಮರ್ಥ್ಯ ತಗ್ಗಿದೆ  ಎಂದರೆ, ಆಕಾಶವೇ ಕಳಚಿ ಮೈಮೇಲೆ ಬಿದ್ದಂತೆ ಎಂದೂ ಅರ್ಥವಲ್ಲ. `ಎಎಎ~ ಸ್ಥಾನಮಾನವು ಅತ್ಯುತ್ತಮ ಸಾಲ ಯೋಗ್ಯತೆ ಎಂದರ್ಥವಷ್ಟೆ.

ಅಮೆರಿಕದ ಅರ್ಥ ವ್ಯವಸ್ಥೆ `ಡಬಲ್ ಡಿಪ್ ರಿಸೆಷನ್~ ಅಪಾಯ ಎದುರಿಸುತ್ತಿದೆ ಎನ್ನುವ ಆತಂಕದ ಹಿನ್ನೆಲೆಯಲ್ಲಿ ಸಾಲದ ಯೋಗ್ಯತೆ ಮಟ್ಟ ಇಳಿಸಲಾಗಿದೆ. ಹಿಂದಿನ ಆರ್ಥಿಕ ಹಿಂಜರಿಕೆಯಿಂದ ಚೇತರಿಸಿಕೊಳ್ಳುತ್ತಿರುವಾಗಲೇ ದೇಶದ ಅರ್ಥವ್ಯವಸ್ಥೆ ಮತ್ತೊಮ್ಮೆ ಆರ್ಥಿಕ ಹಿಂಜರಿತದತ್ತ ಸಾಗುವುದಕ್ಕೆ  `ಡಬಲ್‌ಲ್ ಡಿಪ್ ರಿಸೆಷನ್ (double dip recession) ಎನ್ನುತ್ತಾರೆ.

ತನ್ನ ಸಾಲಗಳನ್ನು ಮರುಪಾವತಿ ಮಾಡಲು ಸಾಧ್ಯವಿಲ್ಲದ (ಸುಸ್ತಿದಾರ) ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಾದ ಕಾರಣಕ್ಕೆ ಒಬಾಮ ಆಡಳಿತವು ಸಾಲದ ಮಿತಿ ಹೆಚ್ಚಿಸಲು ನಿರ್ಧರಿಸಿತ್ತು. ಅದಕ್ಕೆ `ಸಾಲದ ಒಪ್ಪಂದ~ ಎಂದೂ ಕರೆಯಲಾಗಿತ್ತು. ಒಬಾಮ ಆಡಳಿತದ ಈ ಒಪ್ಪಂದಕ್ಕೆ ರಿಪಬ್ಲಿಕನ್ ಪಕ್ಷದ ಸಂಸದರಿಂದ ತೀವ್ರ ಆಕ್ಷೇಪ ಕೇಳಿ ಬಂದಿತ್ತು. `ಎಸ್‌ಆಂಡ್‌ಪಿ~ಯು ಸಾಲದ ಸಾಮರ್ಥ್ಯ ತಗ್ಗಿಸಲು ಇದೇ ಮುಖ್ಯ ಕಾರಣವಾಗಿತ್ತು.

ಈ ಪರಿಸ್ಥಿತಿ ಉದ್ಭವಿಸಲು  `ಟೀ ಪಾರ್ಟಿ ರಿಪಬ್ಲಿಕನ್ನರೇ~ ಕಾರಣ ಎಂದೂ ಶ್ವೇತಭವನವು ಟೀಕಿಸಿತ್ತು. ದೇಶವು ಋಣಭಾರದಲ್ಲಿ ಸಿಲುಕಬೇಕು ಎನ್ನುವುದು `ಸಾಲದ ಒಪ್ಪಂದ~ದ ವಿರೋಧಿಗಳ ನಿಲುವಾಗಿತ್ತು. ಈ `ಟೀ ಪಾರ್ಟಿ~ ರಾಜಕಾರಣಿಗಳು ಸಾಂಪ್ರದಾಯಿಕ ಧೋರಣೆಯವರಾಗಿದ್ದು, ತೆರಿಗೆ ಹೆಚ್ಚಳ ವಿರೋಧಿಸುತ್ತಲೇ, ಸಮತೋಲನದ ಬಜೆಟ್ ತಿದ್ದುಪಡಿ ಬೆಂಬಲಿಸುತ್ತಾರೆ.

ಟ್ರೆಷರಿ ಬಿಲ್ಸ್: ಅಮೆರಿಕ ಸರ್ಕಾರದ ಸಾಲ ಪತ್ರಗಳಿಗೆ ಈ ಹೆಸರಿದೆ. ಬಂಡವಾಳ ಸಂಗ್ರಹಿಸಲು ಅಮೆರಿಕವು ವಿಶ್ವದಾದ್ಯಂತ ತನ್ನ ಸಾಲ ಪತ್ರಗಳನ್ನು ಮಾರಾಟ ಮಾಡುತ್ತದೆ. ಇವು ಗರಿಷ್ಠ ಸುರಕ್ಷತೆಯ ಬಂಡವಾಳ ಹೂಡಿಕೆಯ  ಬಾಂಡ್‌ಗಳಾಗಿವೆ.

ಅಮೆರಿಕವು ಆಹ್ವಾನಿಸಿಕೊಂಡಿರುವ ಈ ಬಿಕ್ಕಟ್ಟಿಗೆ ತನ್ನನ್ನು ತಾನೇ ದೂಷಿಸಿಕೊಳ್ಳಬೇಕು.  ಮುಂದಿನ ಒಂದು - ಒಂದೂವರೆ ವರ್ಷದಲ್ಲಿ ಸಾಲದ ಯೋಗ್ಯತೆಯ ಮಟ್ಟವನ್ನು ಇನ್ನಷ್ಟು ತಗ್ಗಿಸಬೇಕಾದೀತು ಎಂದೂ `ಎಸ್‌ಎಪಿ~ ಎಚ್ಚರಿಸಿರುವುದು ಜಾಗತಿಕ ಮಟ್ಟದ ರಾಜಕಾರಣಿಗಳಿಗೂ ಒಂದು ಪಾಠವಾದೀತು.    
ಪರಿಣಾಮಗಳು
ಅಮೆರಿಕದ ಸರ್ಕಾರಿ ಸಾಲ ಪತ್ರಗಳು (ಟ್ರೆಸರಿ ಬಾಂಡ್) ನೂರಕ್ಕೆ ನೂರರಷ್ಟು ನಷ್ಟದಿಂದ ಮುಕ್ತವಲ್ಲ
ಹೂಡಿಕೆದಾರರು ಹೆಚ್ಚು ಬಡ್ಡಿಗೆ ಒತ್ತಾಯಿಸಬಹುದು. ಇದರಿಂದ ಸರ್ಕಾರ ಸಾಲ ಪಡೆಯುವುದು ದುಬಾರಿಯಾಗಲಿದೆ
ಸರ್ಕಾರಿ ವೆಚ್ಚದಲ್ಲಿ ತೀವ್ರ ಕಡಿತ
ಸರ್ಕಾರಿ ವೆಚ್ಚ ಕಡಿಮೆಯಾದರೆ ಅದರಿಂದ ಆರ್ಥಿಕ ಚೇತರಿಕೆಗೆ ಅಡಚಣೆ ಎದುರಾಗಲಿದೆ
ಸರ್ಕಾರಿ ಸಾಲ ಪತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕಡಿಮೆಯಾಗಲಿದೆ
ಸರ್ಕಾರಿ ಸಾಲ ಪತ್ರ ಹೊಂದಿದ ಚೀನಾಕ್ಕೆ ಪ್ರತಿ ವರ್ಷ 100 ಶತಕೋಟಿ ಡಾಲರ್‌ಗಳಷ್ಟು ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ
ಭಾರತದ ಐ.ಟಿ ವಲಯದಲ್ಲಿ ಹೊಸ  ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಧಕ್ಕೆ ಒದಗಲಿದೆ. ನೇಮಕಾತಿಗಳು ಮತ್ತೆ ಚುರುಕುಗೊಳ್ಳಲು ಐದಾರು ತಿಂಗಳು ಬೇಕಾಗಬಹುದು
ಚಿನ್ನದ ಬೆಲೆ ಅಂಕೆ ಇಲ್ಲದೇ ನಾಗಾಲೋಟದಂತೆ ಓಡುತ್ತಲೇ ಇದೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದರೆ, ಅದರಿಂದ ಸ್ಥಳೀಯವಾಗಿಯೂ ಪೆಟ್ರೋಲ್, ಡೀಸೆಲ್ ಬೆಲೆಗಳೂ ಅಗ್ಗವಾಗುವ ನಿರೀಕ್ಷೆ ಇದೆ.
ಸರ್ಕಾರದ ಸಾಲದ ಒಟ್ಟು ಹೊರೆ 14 ಲಕ್ಷ ಕೋಟಿ (್ಙ 630 ಲಕ್ಷ ಕೋಟಿ) ಡಾಲರ್‌ಗಳಷ್ಟಿದೆ. ಇದರಲ್ಲಿ 4.5 ಲಕ್ಷ ಕೋಟಿ ಡಾಲರ್‌ಗಳಷ್ಟು ಮೊತ್ತವನ್ನು ಸರ್ಕಾರಿ ಸಾಲ ಪತ್ರ ಖರೀದಿಸಿರುವ ವಿದೇಶಗಳಿಗೆ ಪಾವತಿಸಬೇಕಾಗಿದೆ. ಚೀನಾ 1.15 ಲಕ್ಷ ಕೋಟಿ ಡಾಲರ್‌ಗಳಷ್ಟು  ಮೊತ್ತದ ಸಾಲ ಪತ್ರ ಖರೀದಿಸಿ ಮೊದಲ ಸ್ಥಾನದಲ್ಲಿ ಇದ್ದರೆ, 1.83 ಲಕ್ಷ ಕೋಟಿಗಳಷ್ಟು ಸಾಲ ಪತ್ರ ಖರೀದಿಸಿರುವ ಭಾರತ 14ನೇ ಸ್ಥಾನದಲ್ಲಿ ಇದೆ.
ಮುಂದಿನ 10 ವರ್ಷಗಳಲ್ಲಿ ಸರ್ಕಾರದ ವೆಚ್ಚವನ್ನು 2 ರಿಂದ 2.4 ಲಕ್ಷ ಕೋಟಿ ಡಾಲರ್‌ಗಳಷ್ಟು ಕಡಿತ ಮಾಡಲು ಒಬಾಮ ಸರ್ಕಾರ ನಿರ್ಧರಿಸಿದೆ.
ಡೆಮಾಕ್ರಟಿಕ್ ಪಕ್ಷದವರಾಗಿರುವ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ರಿಪಬ್ಲಿಕನ್ ಪಕ್ಷದ ಮಧ್ಯೆ ಸರ್ಕಾರದ ಸಾಲದ ಮಿತಿಯನ್ನು  14 ಲಕ್ಷ ಕೋಟಿ ಡಾಲರ್‌ಗಳಿಗೆ ಹೆಚ್ಚಿಸಲು ನಡೆದ ರಾಜಕೀಯ ಜಿದ್ದಾಜಿದ್ದಿಯ ಫಲವಾಗಿ   ಹಣಕಾಸು ನೀತಿ ದುರ್ಬಲವಾಗಿದೆ.
ಪ್ರಥಮ ತ್ರೈಮಾಸಿಕ ಅವಧಿಯಲ್ಲಿ  ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಪರಾಮರ್ಶೆಯು ಶೇ 1.9ರಿಂದ ಶೇ 0.4ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.