ADVERTISEMENT

ನಾಳೆಯಿಂದ ದೀರ್ಘಾವಧಿ ಬಂಡವಾಳ ಗಳಿಕೆಗೆ ತೆರಿಗೆ

ಪಿಟಿಐ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

ನವದೆಹಲಿ: ದೀರ್ಘಾವಧಿಯ ಬಂಡವಾಳ ಗಳಿಕೆ ಮೇಲಿನ ತೆರಿಗೆ (ಎಲ್‌ಟಿಸಿಜಿ) ಒಳಗೊಂಡು 2018-19ನೇ ಸಾಲಿನ ಬಜೆಟ್‌ನ ಹಲವು ಪ್ರಸ್ತಾವನೆಗಳು ಭಾನುವಾರದಿಂದಲೇ (ಏಪ್ರಿಲ್‌ 1) ಜಾರಿಗೆ ಬರಲಿವೆ.

ಏಪ್ರಿಲ್‌ 1 ರ ನಂತರ ಖರೀದಿಸಿದ, ಒಂದು ವರ್ಷದ ಬಳಿಕ ಮಾರಾಟ ಮಾಡುವ ಷೇರುಗಳಿಂದ ಬರುವ ಲಾಭವು ₹ 1 ಲಕ್ಷಕ್ಕಿಂತಲೂ ಹೆಚ್ಚಿಗೆ ಇದ್ದರೆ ಅದಕ್ಕೆ ಶೇ 10 ರಷ್ಟು ತೆರಿಗೆ ಪಾವತಿಸಬೇಕು.

2014ರ ಜುಲೈನಲ್ಲಿ ಎಲ್‌ಟಿಸಿಜಿ ತೆರಿಗೆಯನ್ನು ಕೈಬಿಟ್ಟು ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ವ್ಯವಸ್ಥೆ ಜಾರಿಗೆ ತರಲಾಗಿತ್ತು.

ADVERTISEMENT

ಜನವರಿ 31ರ ನಂತರ ಖರೀದಿಸಿರುವ ಷೇರುಗಳಿಗೆ ಎಲ್‌ಟಿಸಿಜಿಯಿಂದ ವಿನಾಯ್ತಿ ಸಿಗಲಿದೆ. ಸದ್ಯ ಷೇರು ಖರೀದಿಸಿದ 1 ವರ್ಷದ ಒಳಗಾಗಿ ಮಾರಾಟ ಮಾಡುವುದರಿಂದ ಬರುವ ಲಾಭಕ್ಕೆ ಶೇ 15 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಕಾರ್ಪೊರೇಟ್‌ ತೆರಿಗೆ: ಕಾರ್ಪೊರೇಟ್‌ ತೆರಿಗೆಯನ್ನು ಶೇ 30 ರಿಂದ ಶೇ 25ಕ್ಕೆ ತಗ್ಗಿಸಲಾಗಿದೆ. ವಾರ್ಷಿಕ ₹ 250 ಕೋಟಿ ವಹಿವಾಟು ನಡೆಸುವ ಉದ್ಯಮಗಳಿಗೆ ಏಪ್ರಿಲ್‌ 1 ರಿಂದ ಇದು ಅನ್ವಯವಾಗಲಿದೆ. 2015-16ನೇ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಪೊರೇಟ್‌ ತೆರಿಗೆಯನ್ನು ಶೇ 30 ರಿಂದ ಶೇ 25ಕ್ಕೆ ತಗ್ಗಿಸುವ ಭರವಸೆ ನೀಡಿದ್ದರು.

ಆದಾಯ ತೆರಿಗೆ ಕಾಯ್ದೆಯ ‘ಸೆಕ್ಷನ್‌ 80ಡಿ’ ಅಡಿ ಆರೋಗ್ಯ ವಿಮೆ ಕಂತು ಮತ್ತು ವೈದ್ಯಕೀಯ ವೆಚ್ಚದ ವಿನಾಯ್ತಿ ಮಿತಿಯನ್ನು ಸದ್ಯದ ₹ 30 ಸಾವಿರದಿಂದ ₹50 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಹಿರಿಯ ನಾಗರಿಕರು: ಎಲ್ಲ ಹಿರಿಯ ನಾಗರಿಕರು ಯಾವುದೇ ಆರೋಗ್ಯ ವಿಮೆ ಕಂತು ಮತ್ತು ಸಾಮಾನ್ಯ ವೈದ್ಯಕೀಯ ವೆಚ್ಚದ ರೂಪದಲ್ಲಿ
₹ 50 ಸಾವಿರದವರೆಗೆ ತೆರಿಗೆ ವಿನಾಯ್ತಿ  ಪ್ರಯೋಜನ ಪಡೆದುಕೊಳ್ಳಬಹುದು. ಗಂಭೀರ ಸ್ವರೂಪದ ಕಾಯಿಲೆಗೆ ಮಾಡುವ ವೆಚ್ಚದ ವಿನಾಯ್ತಿ ಮಿತಿ ಯನ್ನು ‘ಸೆಕ್ಷನ್‌ 80ಡಿಡಿಬಿ’ ಅಡಿ ₹ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಹೆಚ್ಚುವರಿ ತೆರಿಗೆ: ಆರೋಗ್ಯ ಮತ್ತು ಶಿಕ್ಷಣದ ಉಪ ತೆರಿಗೆಯನ್ನು ಶೇ 3ರಿಂದ ಶೇ 4ಕ್ಕೆ ಏರಿಸಲಾಗಿದೆ. ಇದು ಆದಾಯ ತೆರಿಗೆ ಮತ್ತು ಕಂಪನಿ ತೆರಿಗೆಗಳೆರಡಕ್ಕೂ ಅನ್ವಯ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.