ADVERTISEMENT

`ನೈಜ ಲೆಕ್ಕ ನೀಡಿ-ತೆರಿಗೆ ಪಾವತಿಸಿ'

ಡಿ.15 ಗಡುವು: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ಗಂಟೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ನವದೆಹಲಿ(ಪಿಟಿಐ): ತೆರಿಗೆ ತಪ್ಪಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸುವಾಗ ನೈಜ ಮಾಹಿತಿಯನ್ನೇ ನೀಡಿರಿ ಮತ್ತು ಡಿಸೆಂಬರ್ 15ರೊಳಗೆ ಮುಂಗಡ ತೆರಿಗೆ ಪಾವತಿಸಿರಿ ಎಂದು ತೆರಿಗೆದಾರರ ಗಮನ ಸೆಳೆದಿದೆ.

ಲೆಕ್ಕಪತ್ರದಲ್ಲಿ ಆದಾಯ ಮತ್ತು ಆದಾಯದ ಮೂಲಗಳ ಕುರಿತು ಸತ್ಯಸಂಗತಿಯನ್ನೇ ದಾಖಲಿಸಬೇಕು. ವಾಸ್ತವ ಮುಚ್ಚಿಟ್ಟು ತೆರಿಗೆ ಪಾವತಿ ತಪ್ಪಿಸಲು ಯತ್ನಿಸುವುದರಿಂದ ಯಾವುದೇ ಪ್ರಯೋಜನವಾಗದು ಎಂದು ಕೇಂದ್ರ ತೆರಿಗೆ ಇಲಾಖೆ ಕಾರ್ಯದರ್ಶಿ ಸುಮಿತ್ ಬೋಸ್ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದ ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಮುಂಗಡ ತೆರಿಗೆ ಪಾವತಿಸುವವರು, ಲೆಕ್ಕಪತ್ರ ಸಲ್ಲಿಸುವವರು ಕಡಿಮೆ ಅಂದಾಜು ಮಾಡಿರುವುದು ಕೆಲವು ಪ್ರಕರಣಗಳಲ್ಲಿ ಗೋಚರಿಸಿದೆ. ಸತ್ಯ ಸಂಗತಿ ತಡವಾಗಿಯಾದರೂ ಇಲಾಖೆ ಗಮನಕ್ಕೆ ಬಂದೇ ಬರುತ್ತದೆ. ಆಗ ಇಲಾಖೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ ವ್ಯಕ್ತಿ-ಸಂಸ್ಥೆಯ ಮನೆ-ಕಚೇರಿಯ ಬಾಗಿಲು ಬಡಿಯುತ್ತಾರೆ. ಇದಕ್ಕೆ ತೆರಿಗೆದಾರರು ಅವಕಾಶ ಕೊಡಬಾರದು ಎಂದು ಕಿವಿಮಾತು ಹೇಳಿದರು.

2012-13ನೇ ಹಣಕಾಸು ಲೆಕ್ಕಾಚಾರ(ಅಸೆಸ್‌ಮೆಂಟ್) ವರ್ಷದಲ್ಲಿ ತೆರಿಗೆಗೆ ಒಳಪಡುವ ರೂ. 10 ಲಕ್ಷಕ್ಕಿಂತ ಹೆಚ್ಚು ಆದಾಯವಿರುವ ಕಂಪೆನಿ ಮತ್ತು ವೃತ್ತಿನಿರತರು ಸೇರಿದಂತೆ ಈವರೆಗೆ 14.62 ಲಕ್ಷ ಮಂದಿ ಆದಾಯ ಮೂಲ ಘೋಷಿಸಿಕೊಂಡಿದ್ದಾರೆ ಎಂದರು.

ಸಮಗ್ರ ಮಾಹಿತಿ
ಒಟ್ಟು 33.83 ಲಕ್ಷ ಮಂದಿ ವಿವಿಧ ಬ್ಯಾಂಕ್‌ಗಳಲ್ಲಿನ ಉಳಿತಾಯ ಬ್ಯಾಂಕ್(ಎಸ್‌ಬಿ) ಖಾತೆಗಳಲ್ಲಿ ರೂ. 10 ಲಕ್ಷ ಮತ್ತು ಅದಕ್ಕೂ ಅಧಿಕ ಮೊತ್ತ ಇಟ್ಟಿದ್ದಾರೆ. ಈ ಮಾಹಿತಿ ಆದಾಯ ತೆರಿಗೆ ಇಲಾಖೆ ಬಳಿ ಇದೆ. ಈ ಸಾಲಿನಲ್ಲಿ 16 ಲಕ್ಷಕ್ಕೂ ಅಧಿಕ  ಮಂದಿ ರೂ. 2 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದ್ದಾರೆ. 11.91 ಲಕ್ಷ ಮಂದಿ ರೂ. 30 ಲಕ್ಷ ಅಥವಾ ಅಧಿಕ ಮೊತ್ತದ ಮನೆ ಖರೀದಿಗೆ ಅಥವಾ ಮಾರಾಟಕ್ಕೆ ನಿರ್ಧಾರ ಕೈಗೊಂಡಿರುವ ಮಾಹಿತಿಯೂ ಇಲಾಖೆಗೆ ಲಭಿಸಿದೆ ಎಂದರು. ಆ ಮೂಲಕ ದೇಶದ ತೆರಿಗೆದಾರರ ಪ್ರಮುಖ ಚಟುವಟಿಕೆಗಳ ಸಮಗ್ರ ಮಾಹಿತಿ ಆದಾಯ ತೆರಿಗೆ ಇಲಾಖೆ ಬಳಿ ಭದ್ರವಾಗಿದೆ ಎಂಬ ಸುಳಿವನ್ನೂ ನೀಡಿದರು.

`ಸರಿಪಡಿಸಿಕೊಳ್ಳಿ'
ಈವರೆಗೂ ಈ ಸಾಲಿನ ಮುಂಗಡ ತೆರಿಗೆ ಪಾವತಿಸದವರು ಹಾಗೂ ಸುಳ್ಳು ಲೆಕ್ಕ ನೀಡಿರುವವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತಿದೆ. ಡಿ. 15ರೊಳಗೆ ಮುಂಗಡ ತೆರಿಗೆ ಪಾವತಿಸಬಹುದು ಮತ್ತು ತಪ್ಪು ಮಾಹಿತಿ ನೀಡಿದ್ದರೆ ಸರಿಪಡಿಸಿಕೊಳ್ಳಬಹುದು ಎಂದು ಬೋಸ್, ಕಡೆ ಬಾರಿಯ ಎಚ್ಚರಿಕೆ ಗಂಟೆ ಬಾರಿಸಿದರು.

ನೇರ ತೆರಿಗೆ ಸಂಗ್ರಹ
ಈ ಸಾಲಿನ ಏಪ್ರಿಲ್-ಅಕ್ಟೋಬರ್ ನಡುವಿನ ಅವಧಿಯಲ್ಲಿ ಒಟ್ಟು 3.02 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 6.59ರಷ್ಟು ಹೆಚ್ಚಳ ಕಂಡುಬಂದಿದೆ. ಈ ಬಾರಿ ಒಟ್ಟು 5.70 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ನೇರ ತೆರಿಗೆಗೆ, ಆದಾಯ ತೆರಿಗೆ, ಸಾಂಸ್ಥಿಕ ತೆರಿಗೆ ಮತ್ತು ಸಂಪತ್ತು ತೆರಿಗೆ ಒಳಪಡುತ್ತವೆ ಎಂದು ಬೋಸ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.