ADVERTISEMENT

ನೋಟು ಬದಲಿಸಲು ಗಡುವು ವಿಸ್ತರಣೆ

2015, ಜನವರಿ 1ರವರೆಗೆ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಮುಂಬೈ (ಪಿಟಿಐ): 2005ಕ್ಕಿಂತ ಮೊದಲು ಮುದ್ರಣಗೊಂಡಿರುವ, ರೂ. 500 ಮತ್ತು ರೂ. 1000 ಮುಖ­ಬೆಲೆಯ ನೋಟುಗಳನ್ನು ಬ್ಯಾಂಕು­ಗಳಲ್ಲಿ ಬದಲಿಸಿಕೊಳ್ಳಲು ಸಾರ್ವ­ಜನಿಕರಿಗೆ ನೀಡಿದ್ದ ಗಡುವನ್ನು ಭಾರ­ತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೆಚ್ಚುವರಿಯಾಗಿ 9 ತಿಂಗಳು ವಿಸ್ತರಿಸಿದೆ. ಸಾರ್ವಜನಿಕರು 2015ರ ಜನವರಿ 1ರವರೆಗೆ ಈ ನೋಟುಗಳನ್ನು ಬದಲಿಸಿಕೊ­ಳ್ಳಬಹುದು. 

‘ನೋಟುಗಳನ್ನು ಬದಲಿಸಿ­ಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಈ ಗಡುವು ಮುಗಿಯುವುದರೊಳಗೆ  ಬದಲಿಸಿಕೊಂಡರೆ ಸಾಕು. ಸದ್ಯ ಈ ನೋಟುಗಳನ್ನು ಬಳಸಿ ವಹಿವಾಟು ನಡೆಸಲು ಯಾವುದೇ ಭಯ ಬೇಡ. ಸಾರ್ವಜನಿಕರು ಅನಗತ್ಯ ಗೊಂದಲಕ್ಕೆ ಬೀಳಬಾರದು’ ಎಂದೂ  ‘ಆರ್‌ಬಿಐ’ ಹೇಳಿದೆ.

ಬದಲಿ ನೋಟುಗಳನ್ನು ನೀಡುವಾಗ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಅವರಿಗೆ ಸಂಪೂರ್ಣ ಮೊತ್ತ­ (ಮುಖ ಬೆಲೆ ಮೌಲ್ಯ) ಪಾವತಿ­ಸಬೇಕು ಎಂದೂ ‘ಆರ್‌­ಬಿಐ’ ಬ್ಯಾಂಕು­ಗಳಿಗೆ ಸೂಚನೆ ನೀಡಿದೆ. 2005ಕ್ಕಿಂತ ಮೊದಲು ಮುದ್ರಣ­ಗೊಂಡ ನೋಟುಗಳ ಹಿಂಭಾಗದಲ್ಲಿ ಮುದ್ರಣ ವರ್ಷ ನಮೂದಾಗಿರು­ವುದಿಲ್ಲ. ಆದರೆ, 2005ರ ನಂತರ ಮುದ್ರಣ­ಗೊಂಡ ನೋಟುಗಳ ಹಿಂಭಾ­ಗದಲ್ಲಿ  ಮುದ್ರಣ ವರ್ಷ ನಮೂ-­ದಾಗಿರುತ್ತದೆ. ಖೋಟಾ ನೋಟುಗಳ ಹಾವಳಿ ತಡೆಯಲು ಏಕರೂಪದ ಭದ್ರತಾ ಗುಣಲಕ್ಷಣ­ಗಳನ್ನು ಹೊಂದಿ­ರುವ ನೋಟುಗಳನ್ನೇ ಚಲಾವಣೆಗೆ ಬಿಡಬೇಕು ಎಂಬ ಅಂತರ­ರಾಷ್ಟ್ರೀಯ ಮಾನದಂಡ ಇದೆ.

ಈ ಹಿನ್ನೆಲೆಯಲ್ಲಿ 2005ಕ್ಕಿಂತ ಮೊದಲು ಮುದ್ರಣಗೊಂಡಿರುವ ರೂ. 500 ಮತ್ತು ರೂ. 1000 ಮುಖ­ಬೆಲೆಯ ನೋಟು­ಗಳನ್ನು  ಏಪ್ರಿಲ್‌ 1ರಿಂದ ಚಲಾವಣೆ­ಯಿಂದ ವಾಪಸ್‌ ಪಡೆಯು­ವುದಾಗಿ ‘ಆರ್‌ಬಿಐ’ ಹೇಳಿತ್ತು. ಆದರೆ, ಸಾರ್ವಜನಿಕರು ಮತ್ತು ಬ್ಯಾಂಕು­ಗಳಿಂದ ಮನವಿ ಬಂದ ಹಿನ್ನೆಲೆ­ಯಲ್ಲಿ ಈಗ ಗಡುವು ವಿಸ್ತರಿಸಲಾಗಿದೆ.

ಈಗಾಗಲೇ ಬಹುಪಾಲು ನೋಟುಗಳನ್ನು ಬದಲಿಸಿಕೊ­ಳ್ಳಲಾ­ಗಿದೆ.  ಸಾರ್ವ­ಜನಿಕರ ಬಳಿ  ಸೀಮಿತ ಸಂಖ್ಯೆಯ ನೋಟುಗಳು ಮಾತ್ರ ಉಳಿದು­ಕೊಂಡಿವೆ. ಇದನ್ನು ಬದಲಿಸಿಕೊಳ್ಳಲು ಗಡುವು ವಿಸ್ತರಿ­ಸಲಾ­ಗಿದೆ ಎಂದೂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.