ADVERTISEMENT

ನೋಟು ರದ್ದತಿ: ಬ್ಯಾಂಕ್‌ಗಳ ಮೇಲೆ ಪ್ರತಿಕೂಲ ಪರಿಣಾಮ

ಬಂಡವಾಳ ಸಂಗ್ರಹ ಪ್ರಕ್ರಿಯೆಗೆ ಅಡಚಣೆ

ಪಿಟಿಐ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
ನೋಟು ರದ್ದತಿ: ಬ್ಯಾಂಕ್‌ಗಳ ಮೇಲೆ ಪ್ರತಿಕೂಲ ಪರಿಣಾಮ
ನೋಟು ರದ್ದತಿ: ಬ್ಯಾಂಕ್‌ಗಳ ಮೇಲೆ ಪ್ರತಿಕೂಲ ಪರಿಣಾಮ   

ನವದೆಹಲಿ: ‘ನೋಟು ರದ್ದತಿಯು ದೇಶದ ಆರ್ಥಿಕ ಪ್ರಗತಿ ತಗ್ಗಿಸಲಿದ್ದು, ಬ್ಯಾಂಕಿಂಗ್‌ ವಹಿವಾಟಿನ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ನೋಟು ರದ್ದತಿಯಿಂದ ಭಾರತದ ಆರ್ಥಿಕತೆ ಮತ್ತು ಬ್ಯಾಂಕಿಂಗ್‌ ವಲಯದ ಮೇಲೆ ದೀರ್ಘಾವಧಿಗೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು  ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಅಂತರರಾಷ್ಟ್ರೀಯ ಬ್ಯಾಂಕಿಂಗ್‌ ಮಾನದಂಡವಾದ ‘ಬಾಸೆಲ್‌–’ ನಿಯಮ ಅಳವಡಿಸಿಕೊಳ್ಳಲು ಮಾರುಕಟ್ಟೆಯಿಂದ ₹15 ಸಾವಿರ ಕೋಟಿ ಸಂಗ್ರಹಿಸಲು ಎಸ್‌ಬಿಐ ಮುಂದಾಗಿದೆ. ಈ ಸಂದರ್ಭದಲ್ಲಿ ನೋಟು ರದ್ದತಿ ಕುರಿತು  ಹೂಡಿಕೆದಾರರಿಗೆ ನೀಡಿರುವ ಪ್ರಾಥಮಿಕ ದಾಖಲೆಯಲ್ಲಿ ಈ ಸಂಗತಿಯನ್ನು  ಉಲ್ಲೇಖಿಸಿದೆ.

‘ನೋಟು ರದ್ದತಿ ಬಳಿಕ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (ಸಿಎಎಸ್‌ಎ) ಠೇವಣಿ ಶೇ 4.10ರಷ್ಟು ಹೆಚ್ಚಾಗಿದ್ದು,  2017ರ ಫೆಬ್ರುವರಿ 17ರ ಅಂತ್ಯಕ್ಕೆ ಒಟ್ಟು ಸಿಎಎಸ್‌ಎ ಶೇ 39.30ಕ್ಕೆ ತಲುಪಿದೆ. ಇದರಿಂದ ಒಟ್ಟಾರೆ ಠೇವಣಿಗಳ ವೆಚ್ಚದಲ್ಲಿ ಇಳಿಕೆ ಕಂಡಿದೆ.

ಇದಕ್ಕೆ ಅನುಗುಣವಾಗಿ ಬ್ಯಾಂಕ್‌ಗಳೂ ನಿಶ್ಚಿತ ಠೇವಣಿ ಬಡ್ಡಿದರಗಳನ್ನು ಕಡಿತ ಮಾಡಿವೆ. ಇದರಿಂದ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಸಾಲ ನೀಡುವ ಇತರೆ ಸಂಸ್ಥೆಗಳಿಂದ ಪೈಪೋಟಿ ಎದುರಿಸುವಂತಾಗಿದೆ. ಪೈಪೋಟಿ ಹೆಚ್ಚಿದಂತೆಲ್ಲಾ ಬ್ಯಾಂಕ್‌ಗಳ ನಿವ್ವಳ ತೆರಿಗೆ ಮತ್ತು ಇತರೆ ಆದಾಯಗಳ ಮೇಲೆ ಪರಿಣಾಮ ಬೀರಲಿದೆ. ಲಾಭದ ಪ್ರಮಾಣ ಕುಸಿತ ಕಾಣುವ ಆತಂಕವೂ ಇದೆ. ನಿರ್ವಹಣಾ ವೆಚ್ಚದಲ್ಲಿ ಏರಿಕೆಯಾಗಲಿದ್ದು ವಂಚನೆ ಪ್ರಕರಣಗಳೂ ಹೆಚ್ಚಾಗುವ ಸಾಧ್ಯತೆ ಇದೆ.

‘ಈ ಕಾರಣಗಳಿಂದ ಬ್ಯಾಂಕ್‌ಗಳ ವಹಿವಾಟು, ಕಾರ್ಯನಿರ್ವಹಣೆ, ಆರ್ಥಿಕ ಸ್ಥಿತಿ ಮತ್ತು ಗೌರವಕ್ಕೆ ಧಕ್ಕೆಯಾಗುವ ಅಪಾಯವೂ ಇದೆ’ ಎಂಬುದನ್ನು ಎಸ್‌ಬಿಐ, ಹೂಡಿಕೆದಾರರ ಗಮನಕ್ಕೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.