ADVERTISEMENT

ಪರಿಣಾಮ ಎದುರಿಸಲು ಭಾರತ ಸನ್ನದ್ಧ

ಅಮೆರಿಕ ಫೆಡರಲ್‌ ಬ್ಯಾಂಕ್‌ ಕ್ರಮ: ಚಿದಂಬರಂ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ): ಅಮೆರಿಕದ ಫೆಡರಲ್‌ ಬ್ಯಾಂಕ್‌ ಆರ್ಥಿಕ ಉತ್ತೇಜನ ಕ್ರಮಗಳನ್ನು ವಾಪಸ್‌ ಪಡೆದಿರುವುದು ಭಾರತದ ಹಣಕಾಸು ಮಾರುಕಟ್ಟೆ ಮೇಲೇನೂ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವುದಿಲ್ಲ. ಅಂತಹ ಪರಿಣಾಮಗಳು ಏನೇ ಇದ್ದರೂ ಸಮರ್ಪಕವಾಗಿ   ಎದುರಿಸಲು ಭಾರತ ಸಜ್ಜಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಅಮೆರಿಕದ ಫೆಡರಲ್‌ ಬ್ಯಾಂಕ್‌ನ ನಿರ್ಧಾರಗಳಿಂದ ಒಂದೊಮ್ಮೆ ತೀವ್ರ ರೀತಿಯ ಪರಿಣಾಮಗಳೇನಾದರೂ ಉಂಟಾದರೆ ಅದನ್ನು ನಿರ್ವಹಿಸಲು ಹೆಚ್ಚುವರಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದೂ ಅವರು ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಅಮೆರಿಕದ ಫೆಡರಲ್‌ ಬ್ಯಾಂಕ್‌ ಕಳೆದ ಜನವರಿಯಿಂದ ಪ್ರತಿ ತಿಂಗಳೂ 8500 ಕೋಟಿ ಡಾಲರ್‌(₨) ಮೌಲ್ಯದ ಬಾಂಡ್‌ಗಳನ್ನು ಖರೀದಿಸುತ್ತಾ ಹಣಕಾಸು ಮಾರುಕಟ್ಟೆಗೆ ಉತ್ತೇಜನ ನೀಡುತ್ತಿತ್ತು.

ಆದರೆ, ಈಗ ಬಾಂಡ್‌ ಖರೀದಿಯನ್ನು 7500 ಕೋಟಿ ಡಾಲರ್‌ಗಳಿಗೆ ಮಿತಿಗೊಳಿಸಿರುವುದಾಗಿ ಬುಧವಾರ ಪ್ರಕಟಿಸಿದೆ. ಫೆಡರಲ್‌ ಬ್ಯಾಂಕ್‌ನ ಈ ನಿರ್ಧಾರ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪಿ.ಚಿದಂಬರಂ ಅವರು, ‘2013ರ ಮೇ ತಿಂಗಳಿನಲ್ಲಿದ್ದುದಕ್ಕಿಂತಲೂ ಈ ಬಾರಿ ನಾವು ಉತ್ತಮ ರೀತಿಯಲ್ಲಿ ಸಿದ್ಧರಾಗಿದ್ದೇವೆ. ಹಾಗಾಗಿ ಅಮೆರಿಕದ ಫೆಡರಲ್‌ ಬ್ಯಾಂಕ್‌ನ ನಿರ್ಧಾರದಿಂದ ಭಾರತದ ಮಾರುಕಟ್ಟೆ ಮೇಲೆ ಹೆಚ್ಚಿನ ಪರಿಣಾಮವೇನೂ ಆಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಡ್ಡಿದರದತ್ತ ಗಮನ
ಬಡ್ಡಿದರ ವಿಚಾರದಲ್ಲಿ ಅಮೆರಿಕ ಮುಂದೆ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನೂ ಗಮನಿಸಬೇಕಿದೆ ಎಂದೂ ಅವರು ಹೇಳಿದರು. ಬಡ್ಡಿದರವನ್ನು ಈಗಿರುವಂತೆಯೇ ಸದ್ಯ ಕೆಳಮಟ್ಟದಲ್ಲಿಯೇ ಮುಂದುವರಿಸುವುದಾಗಿ ಫೆಡರಲ್‌ ಬ್ಯಾಂಕ್‌ ಹೇಳಿದೆ. ಅಮೆರಿಕದ ಕೇಂದ್ರ ಬ್ಯಾಂಕ್‌ ಬುಧವಾರ ಪ್ರಕಟಿಸಿದ ಕ್ರಮಗಳಿಂದ ಉಂಟಾಗಲಿರುವ ಪರಿಣಾಮಗಳನ್ನು ಎದುರಿಸಲು ಅಭಿವೃದ್ಧಿಶೀಲ ದೇಶಗಳು ಸಜ್ಜಾಗಿರಬೇಕು ಎಂದೂ ವಿಶ್ವಸಂಸ್ಥೆ ಪ್ರಕಟಣೆಯಲ್ಲಿ ಗಮನ ಸೆಳೆದಿದೆ.

ಷೇರುಪೇಟೆ ಕುಸಿತ
ಈ ಮಧ್ಯೆ, ದೇಶದ ಷೇರುಪೇಟೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳಿಂದ ಗುರುವಾರ ಅಮೆರಿಕದ ಫೆಡರಲ್‌ ಬ್ಯಾಂಕ್‌ ಕ್ರಮಕ್ಕೆ ‘ಇಳಿಮುಖ’ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ 151.24 ಅಂಶಗಳ ಕುಸಿತ ಕಂಡು 20,708.62 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಇನ್ನೊಂದೆಡೆ ಡಾಲರ್‌ ಎದುರು ರೂಪಾಯಿ 16 ಪೈಸೆ ಮೌಲ್ಯ ಕಳೆದುಕೊಂಡಿದೆ. ಆ ಮೂಲಕ 1 ಡಾಲರ್‌ಗೆ 62.25 ರೂಪಾಯಿಯಂತೆ ವಿನಿಮಯಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT