ADVERTISEMENT

ಪೆಟ್ರೋಲ್‌, ಡೀಸೆಲ್‌ ಬೆಲೆ ಏರುಗತಿಯಲ್ಲಿ

ಪ್ರತಿ ಲೀಟರ್‌ ಬೆಲೆ ₹ 4ರಷ್ಟು ಹೆಚ್ಚಳವಾಗುವ ಸಾಧ್ಯತೆ

ಪಿಟಿಐ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ಪೆಟ್ರೋಲ್‌, ಡೀಸೆಲ್‌ ಬೆಲೆ ಏರುಗತಿಯಲ್ಲಿ
ಪೆಟ್ರೋಲ್‌, ಡೀಸೆಲ್‌ ಬೆಲೆ ಏರುಗತಿಯಲ್ಲಿ   

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಡೆಹಿಡಿಯಲಾಗಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಮಾರಾಟ ದರ ಈಗ ದಿನೇ ದಿನೇ ಹೆಚ್ಚಳಗೊಳ್ಳುತ್ತಿದೆ.

ಹತ್ತೊಂಬತ್ತು ದಿನಗಳ ಕಾಲ ಸ್ಥಗಿತಗೊಳಿಸಿದ್ದ ಪ್ರತಿ ದಿನದ ಬೆಲೆ ಪರಿಷ್ಕರಣೆ ನೀತಿಯನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸೋಮವಾರದಿಂದಲೇ ಮತ್ತೆ ಜಾರಿಗೆ ತಂದಿವೆ. ಎರಡು ಮೂರು ದಿನಗಳಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ 69 ಪೈಸೆ ಮತ್ತು ಡೀಸೆಲ್‌ 86 ಪೈಸೆಗಳಷ್ಟು ಹೆಚ್ಚಳಗೊಂಡಿದೆ. ಈ ದರ ಹೆಚ್ಚಳದಿಂದ ಇಂಧನಗಳ ಬೆಲೆ ಐದು ವರ್ಷಗಳಲ್ಲಿನ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದುಬಾರಿ ಮಟ್ಟದಲ್ಲಿ ಇದ್ದರೂ, ಮೂರು ವಾರಗಳ ಕಾಲ ಇಂಧನ ಬೆಲೆಗಳ ಪರಿಷ್ಕರಣೆಯನ್ನು ತಡೆಹಿಡಿದಿದ್ದರಿಂದ ತೈಲ ಮಾರಾಟ ಸಂಸ್ಥೆಗಳ ಲಾಭ ಕಡಿಮೆಯಾಗಿದೆ. ವಿಧಾನಸಭೆ ಚುನಾವಣೆ ಮುಂಚಿನ ಲಾಭದ ಮಟ್ಟಕ್ಕೆ ಹಿಂದಿರುಗಬೇಕಾದರೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ₹ 4 ರವರೆಗೆ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ ಎಂದು ಕೋಟಕ್‌ ಇನ್‌ಸ್ಟಿಟ್ಯೂಷನಲ್‌ ಈಕ್ವಿಟಿಸ್‌ನ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ದುಬಾರಿ ಕಚ್ಚಾ ತೈಲ, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ಬೆಲೆ ಪರಿಷ್ಕರಣೆ ಸ್ಥಗಿತಗೊಳಿಸಿದ ಕಾರಣಕ್ಕೆ ತೈಲ ಮಾರಾಟ ಸಂಸ್ಥೆಗಳು ₹ 500 ಕೋಟಿಗಳ ನಷ್ಟಕ್ಕೆ ಗುರಿಯಾಗಿವೆ.
*
82.98 ಡಾಲರ್‌: ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ
ಡಾಲರ್‌ ವಿನಿಮಯ ದರ: ₹ 66.62

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.