ADVERTISEMENT

ಪೋಸ್ಕೊ ಯೋಜನೆಗೆ ಕೇಂದ್ರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ನವದೆಹಲಿ/ಭುವನೇಶ್ವರ (ಪಿಟಿಐ ): ಪೋಸ್ಕೊ ಯೋಜನೆಗಾಗಿ ಅರಣ್ಯ ಭೂಮಿ ಬಳಸಿಕೊಳ್ಳಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಜೈರಾಂ ರಮೇಶ್ ಸೋಮವಾರ ಅಂತಿಮವಾಗಿ ಒಪ್ಪಿಗೆ ನೀಡಿದ್ದಾರೆ.

‘ಪೋಸ್ಕೊ ಯೋಜನೆಗೆ 1253 ಎಕರೆ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಲಾಗಿದೆ’ ಎಂದು ಸಚಿವರು ಇಲ್ಲಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಒಡಿಶಾ ಸರ್ಕಾರ ಈ ಬಗ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಆದೇಶದ ಪ್ರತಿ ದೊರೆತ ಬಳಿಕ ‘ಸೂಕ್ತ ಕ್ರಮ’ ಕೈಗೊಳ್ಳುವುದಾಗಿ ಹೇಳಿದೆ.

‘ಆದೇಶವನ್ನು ನಾವಿನ್ನೂ ಪಡೆಯಬೇಕಿದೆ. ಇಂತಹ ನಿರ್ಣಯ  ಅಂಗೀಕರಿಸಲಾಗಿದೆ ಎಂಬುದನ್ನು ನಾವು ಈಗಷ್ಟೆ ಮಾಧ್ಯಮಗಳಿಂದ ತಿಳಿದಿದ್ದೇವೆ. ಆದೇಶದ ಪ್ರತಿ ನಮಗೆ ದೊರೆತ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್  ಸುದ್ದಿಗಾರರಿಗೆ ಇಲ್ಲಿ ತಿಳಿಸಿದ್ದಾರೆ.

ಒಡಿಶಾದ ಕೃಷಿ ಸಚಿವ, ಉದ್ದೇಶಿತ ಘಟಕದ ನಿವೇಶನವಿರುವ ಕ್ಷೇತ್ರದಿಂದ ಸುಮಾರು 35 ವರ್ಷಗಳಿಂದಲೂ ಶಾಸಕರಾಗಿರುವ ದಾಮೋದರ್ ರೌತ್ ಅವರು ಸಚಿವಾಲಯದ ಆದೇಶವನ್ನು ಸ್ವಾಗತಿಸಿದ್ದಾರೆ.

ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ರೂ 52 ಸಾವಿರ ಕೋಟಿ ಮೊತ್ತದ ಯೋಜನೆ ಕಾರ್ಯಗತಗೊಳಿಸಲು ಇದು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ‘ಏಪ್ರಿಲ್ 29 ಮತ್ತು 30ರಂದು ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಅವರು ಒಡಿಶಾಗೆ ಭೇಟಿ ನೀಡಿದ್ದು ರಾಜ್ಯಕ್ಕೆ ಮತ್ತು ಪೋಸ್ಕೊ ಯೋಜನೆಗೆ ಲಾಭದಾಯಕವಾಗಿದೆ, ಯಾವುದೇ ಕಾರಣವಿಲ್ಲದೆ ಕೆಲವರು ಉದ್ದೇಶಪೂರ್ವಕವಾಗಿ ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂಬುದು ಸಚಿವರಿಗೆ ಗೊತ್ತಾಗಿದೆ’ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಕೊರಿಯಾದ ಉಕ್ಕು ಕಂಪೆನಿಯೊಂದಿಗೆ ರಾಜ್ಯ ಸರ್ಕಾರ 2005ರಲ್ಲಿ ಒಡಂಬಡಿಕೆಗೆ ಸಹಿ ಹಾಕಿದ ನಂತರದಿಂದ ಇದನ್ನು ವಿರೋಧಿಸುತ್ತಿರುವ ಪೋಸ್ಕೊ ಪ್ರತಿರೋಧ್ ಸಂಗ್ರಾಮ್ ಸಮಿತಿಯು ಹಿಂದಿನಂತೆಯೇ ಉಕ್ಕು ಘಟಕ ಸ್ಥಾಪನೆಯನ್ನು ವಿರೋಧಿಸುತ್ತದೆ ಮತ್ತು ಯೋಜನೆಗಾಗಿ ಅರಣ್ಯ ಭೂಮಿ ನೀಡಲು  ಒಪ್ಪಿಗೆ ನೀಡಿರುವುದಕ್ಕೆ ಕೂಡ ಸ್ಥಳೀಯರು ‘ಅಸಮಾಧಾನ’ಗೊಂಡಿದ್ದಾರೆ ಎಂದು ಸಮಿತಿ ಹೇಳಿದೆ.

‘ಉದ್ದೇಶಿತ ಘಟಕ ಸ್ಥಾಪನೆ ನಿವೇಶನ ದ ಗ್ರಾಮಗಳ ಗ್ರಾಮಸ್ಥರು ಅವರ ಹಕ್ಕಿನಿಂದ ವಂಚಿತರಾಗುತ್ತಾರೆ ಎಂಬುದು ನಮ್ಮ ಭಾವನೆ. ಈ ವಿಷಯದ ಬಗ್ಗೆ ನ್ಯಾಯಾಲಯದ ಮೊರೆ ಹೋಗಲೂ ನಾವು ಹಿಂಜರಿಯುವುದಿಲ್ಲ’ ಎಂದು ಸಮಿತಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.