ADVERTISEMENT

`ಪ್ರತಿಕೂಲ ಪರಿಣಾಮ ಇಲ್ಲ'

ರೂಪಾಯಿ ಅಪಮೌಲ್ಯ ತಡೆಗೆ `ಆರ್‌ಬಿಐ' ಕ್ರಮ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ಜೈಪುರ(ಪಿಟಿಐ): `ರೂಪಾಯಿ ಅಪಮೌಲ್ಯ ತಡೆಗೆ `ಭಾರತೀಯ ರಿಸರ್ವ್ ಬ್ಯಾಂಕ್'(ಆರ್‌ಬಿಐ) ಕೆಲವು ಕ್ರಮಗಳನ್ನು ಪ್ರಕಟಿಸಿದ್ದರೂ ಅದು ಜುಲೈ 30ರ ಮೊದಲ ತ್ರೈಮಾಸಿಕ ಹಣಕಾಸು ನೀತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

`ನಾವು ಎಷ್ಟು ವಿದೇಶಿ ವಿನಿಮಯ ಗಳಿಸುತ್ತೇವೆ ಮತ್ತು ಎಷ್ಟು ಖರ್ಚು ಮಾಡುತ್ತೇವೆ' ಎನ್ನುವುದರ ಮೇಲೆ ರೂಪಾಯಿ ಮೌಲ್ಯ ನಿರ್ಧಾರವಾಗುತ್ತದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯ ಏರಿಳಿತ ತಪ್ಪಿಸಲು ಸರ್ಕಾರ ಅಥವಾ `ಆರ್‌ಬಿಐ'  ಇಷ್ಟು ಮಾಡಲು ಸಾಧ್ಯ. ಆರ್‌ಬಿಐ ಸರ್ಕಾರದ ಜತೆ ಚರ್ಚಿಸಿಯೇ ಈ   ನಿರ್ಧಾರ ಕೈಗೊಂಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚಿನ್ನ ಆಮದು ಹೆಚ್ಚಳದಿಂದ ದೇಶದ `ಚಾಲ್ತಿಖಾತೆ ಕೊರತೆ'(ಸಿಎಡಿ) ಹೆಚ್ಚಿದೆ. ಇದರಿಂದ ಚಿನ್ನ ಆಮದು ಪೂರ್ಣವಾಗಿ ನಿಷೇಧಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಚಿದಂಬರಂ, `ಇಲ್ಲ' ಎಂದು ಸ್ಪಷ್ಟವಾಗಿಯೇ ಉತ್ತರಿಸಿದರು.

ಸರ್ಕಾರ ಮತ್ತು `ಆರ್‌ಬಿಐ' ತೆಗೆದುಕೊಂಡ ಕ್ರಮಗಳಿಂದ ಚಿನ್ನದ ಆಮದು ಈಗಾಗಲೇ ಸಾಕಷ್ಟು ತಗ್ಗಿದೆ. ಜನರೂ ಮೊದಲಿನಂತೆ ಈಗ ಚಿನ್ನ ಖರೀದಿಗೆ ಮುಗಿಬೀಳುತ್ತಿಲ್ಲ. 20 ಗ್ರಾಂ ಖರೀದಿಸಬೇಕೆಂದವರು 10 ಗ್ರಾಂ ಖರೀದಿಸುತ್ತಿದ್ದಾರೆ. ಇದು ಸಕಾರಾತ್ಮಕ ಬೆಳವಣಿಗೆ ಎಂದರು.

ಡಿಟಿಸಿ ಮಸೂದೆ
ಆಗಸ್ಟ್ 5ರಿಂದ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, `ನೇರ ತೆರಿಗೆಗಳ ಸಮಗ್ರ ಕಾಯ್ದೆ'(ಡಿಟಿಸಿ) ಮಸೂದೆ  ಮಂಡಿಸಲಾಗುವುದು ಎಂದು ಚಿದಂಬರಂ ಹೇಳಿದ್ದಾರೆ. 50 ವರ್ಷಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆಗಳ ಬದಲಿಗೆ `ಡಿಸಿಟಿ' ಜಾರಿಗೆ ಬರಲಿದೆ.
ಸರಕು ಮತ್ತು ಸೇವಾ ತೆರಿಗೆ  (ಜಿಎಸ್‌ಟಿ) ಜಾರಿಗೆ ಎರಡು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಡ್ಡಿದರ ಬದಲಿಲ್ಲ: ಎಸ್‌ಬಿಐ
ಬೆಂಗಳೂರು:
`ಆರ್‌ಬಿಐ' ಸೋಮವಾರ ಪ್ರಕಟಿಸಿದ ಕ್ರಮಗಳು ಹಣಕಾಸು ಮಾರುಕಟ್ಟೆಯಲ್ಲಿನ ಊಹೆ ಆಧರಿಸಿದ ವಹಿವಾಟುಗಳಿಗೆ ತಡೆಯೊಡ್ಡುವುದೇ ಹೊರತು, ಸದ್ಯದ ಬ್ಯಾಂಕಿಂಗ್ ಚಟುವಟಿಕೆ ಅಥವಾ ಬಡ್ಡಿದರದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಮುಂಬೈನಲ್ಲಿ ಮಂಗಳವಾರ `ಎಸ್‌ಬಿಐ' ನಿರ್ದೇಶಕ ಮಂಡಳಿ ಸಭೆಯಲ್ಲಿಯೂ ಬಡ್ಡಿದರದಲ್ಲಿ ಬದಲಾವಣೆ ತರುವ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ರೂ.ಮೌಲ್ಯವರ್ಧನೆಗೆ ಕ್ರಮ
ಮುಂಬೈ (ಪಿಟಿಐ)
: ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ ತಡೆಗೆ ಸಂಬಂಧಿಸಿದಂತೆ `ಭಾರತೀಯ ರಿಸರ್ವ್ ಬ್ಯಾಂಕ್' (ಆರ್‌ಬಿಐ) ಸೋಮವಾರ ರಾತ್ರಿ ಕೆಲವು ನಿಯಂತ್ರಣ ಕ್ರಮಗಳನ್ನು ಪ್ರಕಟಿಸಿದೆ. ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇ 2ರಷ್ಟು ಹೆಚ್ಚಿಸಲಾಗಿದೆ ಮತ್ತು ಮಾರುಕಟ್ಟೆಯಿಂದ ರೂ.12 ಸಾವಿರ ಕೋಟಿ ವಾಪಸ್ ಪಡೆಯುವ ನಿರ್ಧಾರವನ್ನೂ ಕೈಗೊಂಡಿದೆ. ಇದರಿಂದ ರೂಪಾಯಿ ಮೌಲ್ಯ ಚೇತರಿಕೆ ಕಾಣುವ ನಿರೀಕ್ಷೆ ಇದೆ.

ಸದ್ಯ `ಆರ್‌ಬಿಐ' ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರ ಶೇ 8.25ರಿಂದ ಶೇ 10.25ಕ್ಕೆ ಏರಿದೆ. ಇದರಿಂದ ವಾಹನ, ಗೃಹ, ಕಾರ್ಪೊರೇಟ್ ಸಾಲಗಳು ಬಹಳ ತುಟ್ಟಿಯಾಗಲಿವೆ. ಜತೆಗೆ ಜುಲೈ 18ರಂದು ರೂ.12 ಸಾವಿರ ಕೋಟಿ ಮೌಲ್ಯದ ಸರ್ಕಾರಿ ಸಾಲಪತ್ರಗಳನ್ನು ಮಾರಾಟ ಮಾಡಲು `ಆರ್‌ಬಿಐ' ನಿರ್ಧರಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಹೆಚ್ಚಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು `ಆರ್‌ಬಿಐ' ಗವರ್ನರ್ ಡಿ. ಸುಬ್ಬರಾವ್ ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಬಳಿಕ ರಾತ್ರಿ `ಆರ್‌ಬಿಐ' ಈ ಕ್ರಮಗಳನ್ನು ಪ್ರಕಟಿಸಿದೆ.

`ಆರ್‌ಬಿಐ'ನ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ(ಎಂಎಸ್‌ಎಫ್) ದರ 300 ಮೂಲಾಂಶಗಳಷ್ಟು ಹೆಚ್ಚಿದೆ. ಆದರೆ, `ರೆಪೊ'(ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಬಡ್ಡಿ) ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 2011- 12ನೇ ಸಾಲಿನಲ್ಲಿ `ಎಂಎಸ್‌ಎಫ್' ಜಾರಿಗೆ ತರಲಾಗಿದೆ. ಇದರನ್ವಯ ಮಾರುಕಟ್ಟೆಯಲ್ಲಿ ಕರೆನ್ಸಿ ಮೌಲ್ಯದಲ್ಲಿ ತೀವ್ರ ಏರಿಳಿತವಾದಾಗ `ಆರ್‌ಬಿಐ' ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ನೀಡುವ ಸಾಲ ದರವನ್ನು ಗರಿಷ್ಠ ಮಟ್ಟದಲ್ಲಿ ಹೆಚ್ಚಿಸುವ ಅವಕಾಶ ಇದೆ.

ಹಣದುಬ್ಬರ, ಮಾರುಕಟ್ಟೆ ಪರಿಸ್ಥಿತಿ, ನಗದು ಲಭ್ಯತೆ ಪ್ರಮಾಣ ಮತ್ತು ಇತರೆ ಸಮಗ್ರ ಆರ್ಥಿಕ ಅಂಶಗಳನ್ನು ಪರಿಗಣಿಸಿ ಅಗತ್ಯ ಬಿದ್ದರೆ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ `ಆರ್‌ಬಿಐ' ಹೇಳಿದೆ.

ರೂಪಾಯಿ ಅಪಮೌಲ್ಯ ತಡೆಗೆ ಕಳೆದ ವಾರ `ಆರ್‌ಬಿಐ' ಸರ್ಕಾರಿ ಸ್ವಾಮ್ಯದ ಒಂದೇ ಬ್ಯಾಂಕ್‌ನಲ್ಲಿ ಡಾಲರ್ ಸೇರಿದಂತೆ ವಿದೇಶಿ ನಗದು ಖರೀದಿಸುವಂತೆ ತೈಲ ಆಮದು ಮಾಡಿಕೊಳ್ಳುವ ಕಂಪೆನಿಗಳಿಗೆ ಸೂಚಿಸಿತ್ತು. ಕಚ್ಚಾತೈಲ ಆಮದಿಗಾಗಿಯೇ ಪ್ರತಿ ತಿಂಗಳು 800 ಕೋಟಿಯಿಂದ 850 ಕೋಟಿ ಅಮೆರಿಕನ್ ಡಾಲರ್‌ಗಳಿಗೆ ತೈಲ ಕಂಪೆನಿಗಳಿಂದ ಬೇಡಿಕೆ ಇದೆ.

ರೂಪಾಯಿ ಮೌಲ್ಯ ಕಳೆದ 6 ವಾರಗಳಿಂದ ನಿರಂತರ ಇಳಿಕೆ ಕಾಣುತ್ತಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈ ಮಧ್ಯೆ, `ಕೇಂದ್ರದ ಹಣಕಾಸು ನಿರ್ವಹಣೆ ವ್ಯವಸ್ಥೆ ಸರಿಯಾಗಿಲ್ಲ. ಮನಮೋಹನ್ ಸಿಂಗ್ ಒಬ್ಬ ವಿಫಲ ಅರ್ಥಶಾಸ್ತ್ರಜ್ಞ' ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.