ADVERTISEMENT

ಪ್ರತಿಸ್ಪರ್ಧಿ ಸಂಸ್ಥೆ ಕೈವಾಡ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ): ಕಾರ್ಪೊರೇಟ್ ಪ್ರತಿಸ್ಪರ್ಧಿಗಳು ಮತ್ತು ಷೇರುಮಾರುಕಟ್ಟೆಯಲ್ಲಿ ಕೈವಾಡ ನಡೆಸುವವರ ಗುಂಪು, ಹೂಡಿಕೆದಾರರಲ್ಲಿ ಭಯಭೀತಿ ಮೂಡಿಸುತ್ತಿರುವ  ಬಗ್ಗೆ ತನಿಖೆ ನಡೆಸಬೇಕು ಎಂದು ಅನಿಲ್ ಅಂಬಾನಿ ಒಡೆತನದ ಸಮೂಹವು ಒತ್ತಾಯಿಸಿದೆ.

ವಿರೋಧಿಗಳು ಅಕ್ರಮವಾಗಿ ಒಕ್ಕೂಟ ರಚಿಸಿಕೊಂಡು ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ (ಎಡಿಎಜಿ) ಷೇರುಗಳ ಬೆಲೆಗಳು ಗಮನಾರ್ಹವಾಗಿ ಕುಸಿತಗೊಳ್ಳಲು ಕಾರಣವಾಗುತ್ತಿದ್ದಾರೆ. ಹೂಡಿಕೆದಾರರಲ್ಲಿ ಆತಂಕ ಮೂಡಿಸಿ ಮಾರಾಟಕ್ಕೆ ಉತ್ತೇಜಿಸಿ ಭಾರಿ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಷೇರುಗಳನ್ನು ಮಾರಾಟ ಮಾಡಿ ಕಳೆದ ಕೆಲ ವಾರಗಳಲ್ಲಿ ಮೂಲ ಸೌಕರ್ಯ ರಂಗದ ಮಾರುಕಟ್ಟೆ ಮೌಲ್ಯವನ್ನು ರೂ. 3 ಲಕ್ಷ ಕೋಟಿಗಳಷ್ಟು ಹಾಳು ಮಾಡಿದ್ದಾರೆ ಎಂದು ದೂರಲಾಗಿದೆ.  ಬಂಡವಾಳ ಮಾರುಕಟ್ಟೆ ಅಸ್ಥಿರಗೊಳಿಸುವ ಯತ್ನಗಳ ಬಗ್ಗೆ ತನಿಖೆ ನಡೆಸಲು ನಾವು ಷೇರು ನಿಯಂತ್ರಣ ಮಂಡಳಿ (ಸೆಬಿ), ಬೇಹುಗಾರಿಕಾ ಪಡೆಗಳಿಗೆ ಮನವಿ ಮಾಡಿಕೊಂಡಿರುವುದಾಗಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಗೌತಮ್ ದೋಷಿ ಅಭಿಪ್ರಾಯಪಟ್ಟಿದ್ದಾರೆ. ಬುಧವಾರದ ವಹಿವಾಟಿನಲ್ಲಿ ‘ಎಡಿಎಜಿ’ ಷೇರುಗಳ ಬೆಲೆಗಳು ಶೇ 19ರಷ್ಟು ಕುಸಿತ ದಾಖಲಿಸಿದ್ದವು. ಇದರಿಂದ ಒಂದೇ ದಿನದಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ್ಙ 11,000 ಕೋಟಿಗಳಷ್ಟು ನಷ್ಟ ಉಂಟಾಗಿತ್ತು.ಗುರುವಾರದ ವಹಿವಾಟಿನಲ್ಲಿ ಈ ಸಮೂಹದ ಷೇರುಗಳು ಕೆಲ ಮಟ್ಟಿಗೆ ಲಾಭ ಮಾಡಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT