ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST

ವಿಜಯಲಕ್ಷ್ಮಿ, ಹೂವಿನಹಡಗಲಿ
ಪ್ರಶ್ನೆ: ತಾವು ನೀಡುವ ಅನೇಕ ಆರ್ಥಿಕ ಸಲಹೆಗಳು ನಮ್ಮಂತಹ ಜನರಿಗೆ ಬಹಳ ಉಪಯುಕ್ತ. ನಮ್ಮ ಸಮಸ್ಯೆಗೂ ಪರಿಹಾರ ನೀಡಬೇಕಾಗಿ ವಿನಂತಿ.
ನನ್ನ ತಂದೆ 2007ರ ಮಾರ್ಚ್‌ನಲ್ಲಿ `ಎಲ್‌ಐಸಿ ಮನಿಪ್ಲಸ್' ಯೋಜನೆ ಖರೀದಿಸಿ ಪ್ರತಿ ವರ್ಷರೂ10,000ದಂತೆ ಐದು ಕಂತುಗಳಲ್ಲಿ ಈವರೆಗೆ ರೂ. 50,000 ಕಟ್ಟಿರುತ್ತಾರೆ. ಏಜೆಂಟರ ಮಾತು ಕೇಳಿ, ಮೂರು ವರ್ಷದಲ್ಲಿ `ಡಬ್ಬಲ್' ಆಗುತ್ತದೆ ಎಂದು ತಮ್ಮ ನಿವೃತ್ತಿ ಹಣದಲ್ಲಿರೂ 3 ಲಕ್ಷವನ್ನು ಅಪ್ಪ, ಅಮ್ಮ, ಮತ್ತು ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ `ಮಾರ್ಕೆಟ್ ಪ್ಲಸ್' ಯೋಜನೆಯಲ್ಲಿ ತೊಡಗಿಸಿದ್ದಾರೆ. ಈಗ ವಿಚಾರಿಸಿದರೆ, ಷೇರು ಮಾರುಕಟ್ಟೆ ಏರಿಳಿತದಿಂದಾಗಿ ಕಟ್ಟಿದಷ್ಟೂ ಹಣ ಕೂಡಾ ವಾಪಸ್ ಬರಲಿಕ್ಕಿಲ್ಲ ಎನ್ನುತ್ತಿದ್ದಾರೆ ಏಜೆಂಟರು. ಮಾರ್ಕೆಟ್ ಪ್ಲಸ್ ಹಾಗೂ ಮನಿಪ್ಲಸ್ `ಸಿಂಗಲ್ ಪ್ರೀಮಿಯಂ' ಕಟ್ಟಿದರೆ ಹೆಚ್ಚು ಕಡಿಮೆ ಅಸಲಾದರೂ ಸಿಗುತ್ತದೆ. ಆದರೆ ಉಳಿದುದರಲ್ಲಿ ಇದೂ ಸಿಗಲಿಕ್ಕಿಲ್ಲ ಎನ್ನುತ್ತಾರೆ. ಈ ವಿಚಾರವಾಗಿಯೂ ಸಲಹೆ ನೀಡಿರಿ.


ಉತ್ತರ: ನಿಮ್ಮ ತಂದೆ ನಿವೃತ್ತಿಯಿಂದ ಬಂದ ಹಣವನ್ನೆಲ್ಲ ಏಜೆಂಟರ ಸಲಹೆಯಂತೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿದಂತೆ ಕಾಣುತ್ತದೆ. ಏಜೆಂಟರು, ಹಣ ದ್ವಿಗುಣ, ಕಮಿಷನ್, ಉಡುಗೊರೆ ಆಸೆ ತೋರಿಸಿ ಹೂಡಿಕೆಯತ್ತ ಗಮನ ಸೆಳೆಯುವುದು ಸಾಮಾನ್ಯ ವಿಚಾರ. ಮಧ್ಯಮ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಇಂತಹ ಆಮಿಷ ತೋರಿಸಿ ಬಹುಬೇಗ ಹಣ ಹೂಡುವಂತೆ ಮಾಡುತ್ತಾರೆ ಎಂಬ ಬಗ್ಗೆ ನಾನು ಈ ಹಿಂದೆ ಹಲವು ಬಾರಿ ಗಮನ ಸೆಳೆದಿದ್ದೆ.

ಹಣ ಮೂರು ವರ್ಷಗಳಲ್ಲಿ `ಡಬ್ಬಲ್' ಆಗುತ್ತದೆ ಎಂದರೆ ಯಾರಿಗೆ ತಾನೇ ಕಿವಿ ನೆಟ್ಟಗಾಗದಿರದು? ಮ್ಯೂಚುವಲ್ ಫಂಡ್ ಹೂಡಿಕೆಯು ಷೇರು ಮಾರುಕಟ್ಟೆ ಅವಲಂಭಿಸಿರುವವರೆಗೂ ಹಲವು ಕಂತು ಅಥವಾ ಒಂದೇ ಕಂತಿನಲ್ಲಿ ಹಣ ಹೂಡಲಿ, ಹೂಡಿದ ಹಣ ಕಂಟಕ(ರಿಸ್ಕ್)ದಿಂದ ಎಂದಿಗೂ ಹೊರತಾಗಿರಲು ಸಾಧ್ಯವೇ ಇಲ್ಲ.ಷೇರು ಮಾರುಕಟ್ಟೆ ಸೂಚ್ಯಂಕ ಸ್ವಲ್ಪ ಮೇಲೇರಿದಾಗ ಎನ್‌ಎವಿ ವಿಚಾರಿಸಿ ನಿಮ್ಮ ಅಸಲಾದರೂ ಬರುವಂತಿದ್ದರೆ ಹಣ ವಾಪಸ್ ಪಡೆದುಕೊಳ್ಳಿ. ಬಂದ ಹಣವನ್ನು ಬ್ಯಾಂಕಿನಲ್ಲಿ ಅವಧಿ ಠೇವಣಿಯಲ್ಲಿರಿಸಿ ನಿಶ್ಚಿಂತರಾಗಿರಿ.

ಮಹಮದ್ ಸಾದರ್ ಉಲ್ಲ, ದಾವಣಗೆರೆ
ಪ್ರಶ್ನೆ: ವಯಸ್ಸು 62. ಎರಡು ವರ್ಷದಿಂದರೂ 1116 ಪಿಂಚಣಿ ಬರುತ್ತಿದೆ. ಸ್ವಂತ ಮನೆ ಇದೆ. ಮಗಳ ಮದುವೆ ಆಗಿದೆ. ಒಬ್ಬನೇ ಮಗ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅವನ ಮಾಸಿಕ ವೇತನರೂ15,000. ನನಗೆ ಬೇರಾವ ಸಮಸ್ಯೆ ಇಲ್ಲ. ಇರುವ ಒಂದೇ ಒಂದು ಸಮಸ್ಯೆ ಎಂದರೆ, ನಾನು ಮುಸ್ಲಿಮ್ ಆಗಿರುವುದರಿಂದ ನಮ್ಮಧರ್ಮದ ತತ್ವ ಪ್ರಕಾರ ಬಡ್ಡಿ ಹಣ ಪಡೆಯುವಂತಿಲ್ಲ. ನಿವೃತ್ತಿಯಿಂದ ಬಂದ ಹಣ  ರೂ 8 ಲಕ್ಷವನ್ನು ಬ್ಯಾಂಕಿನಲ್ಲಿಟ್ಟಿದ್ದೇನೆ. ಆದರೆ, ಧಾರ್ಮಿಕ ಕಾರಣದಿಂದ ಫಿಕ್ಸೆಡ್ ಡಿಪಾಸಿಟ್ ಮಾಡಿಲ್ಲ. ಮ್ಯೂಚುವಲ್ ಫಂಡ್ ಅಥವಾ ಷೇರು ಹೂಡಿಕೆಯಿಂದ ಬರುವ ಲಾಭ ಉಪಯೋಗಿಸಬಹುದು ಎಂದು ನಮ್ಮವರು ಹೇಳುತ್ತಾರೆ.ರೂ8 ಲಕ್ಷ ಹೇಗೆ-ಎಲ್ಲಿ ಹೂಡಲಿ? ತಿಂಗಳ ಅಥವಾ ವಾರ್ಷಿಕ ವರಮಾನ ಮಾರ್ಗವಾದರೂ ಸರಿ. ದಯಮಾಡಿ ಪರಿಹಾರ ಸೂಚಿಸಿ.


ಉತ್ತರ: ಮಹಮದ್ ಸಾದತ್ ಉಲ್ಲ ಸಾಹೇಬರೇ ನಿಮಗಿರುವ ಧರ್ಮಾಭಿಮಾನವನ್ನು ನಿಜವಾಗಿ ಮೆಚ್ಚಲೇಬೇಕು. ಆದರೆ ನಿಮಗೆ ಬೇರಾವ ಆದಾಯವಿಲ್ಲದೇ ಇರುವುದರಿಂದ ನಿಮ್ಮಲ್ಲಿರುವರೂ 8 ಲಕ್ಷವನ್ನು ಪ್ರತಿ ತಿಂಗಳೂ ಸ್ವಲ್ಪ ಸ್ವಲ್ಪವಾಗಿ ಉಪಯೋಗಿಸಿದರೂ `ಕುಡಿಕೆ ಹೊನ್ನು ಕೊನೆತನಕ ಬರಲಾರದು' ಎನ್ನುವ ಗಾದೆಯಂತೆ ಈ ಹಣ ಪೂರ್ಣ ಖಾಲಿಯಾಗಿಬಿಡುತ್ತದೆ. ಆ ನಂತರ ನಿಮ್ಮ ಜೀವನ ವೆಚ್ಚಕ್ಕೆ ತೊಂದರೆಯಾಗುವುದರಲ್ಲಿ ಸಂಶಯವೇ ಇಲ್ಲ. ನೀವು ಹೂಡಿಕೆ ವಿಚಾರದಲ್ಲಿ ಭಯಪಡುವ ಅವಶ್ಯವಿಲ್ಲ. ಪ್ರತಿ ಸಮಸ್ಯೆಗೂ ದೇವರು ಪರಿಹಾರ ನೀಡಿರುತ್ತಾನೆ. ನೀವು ಈ ಕೆಳಗಿನಂತೆರೂ8 ಲಕ್ಷವನ್ನು ವಿನಿಯೋಜಿಸಿರಿ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಲಾಭ-ನಷ್ಟ ಎರಡೂ ಅನುಭವಿಸಬೇಕಾದೀತು. ಮ್ಯೂಚುವಲ್ ಫಂಡ್ ಕೂಡಾ ಷೇರು ಮಾರುಕಟ್ಟೆಯ ಇನ್ನೊಂದು ಮುಖ. ಆದರೆ `ಡೆಟ್ ಮಾರ್ಕೆಟ್'ನಲ್ಲಿ (ಸರ್ಕಾರದ ಸಾಲದ ಬಾಂಡ್‌ಗಳಲ್ಲಿ ಹಣ ಹೂಡುವುದು) ವ್ಯವಹರಿಸುವಂತಹ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹಣ ಹೂಡಿರಿ. ಇಲ್ಲಿ ಖಚಿತವಾಗಿ ಲಾಭ ಬರುತ್ತದೆ. ಮ್ಯೂಚುವಲ್ ಫಂಡ್‌ಗಳು ತಮ್ಮ ಯೋಜನೆಗಳಿಂದ ಗಳಿಸುವ ಲಾಭವನ್ನು ಡಿವಿಡೆಂಡ್(ಲಾಭಾಂಶ) ರೂಪದಲ್ಲಿ ಹೂಡಿಕೆದಾರರಿಗೆ ವಿತರಿಸುತ್ತವೆ. ಇದರಿಂದ ನೀವು ಆದಾಯ ಪಡೆದಂತೆಯೂ ಆಗುತ್ತದೆ, ಧರ್ಮ ಪಾಲನೆ ಮಾಡಿದಂತೆಯೂ ಆಗುತ್ತದೆ.

ಮ್ಯೂಚುವಲ್ ಫಂಡ್‌ನವರು ಲಾಭ ಬಂದಾಗಲೆಲ್ಲಾ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ. ಇದು ಬಡ್ಡಿ ಪಡೆದಂತೆ ಆಗುವುದಿಲ್ಲ. ನಿಮಗೊಂದು ಕಿವಿಮಾತು. ಯಾವುದೇ ಕಾರಣಕ್ಕೂ `ಡೆಟ್ ಮಾರ್ಕೆಟ್' ಆಧಾರಿತ ಮ್ಯೂಚುವಲ್ ಫಂಡ್ ಹೂಡಿಕೆ ಹೊರತುಪಡಿಸಿ ಬೇರಾವ ಯೋಜನೆಯಲ್ಲಿಯೂ ಹಣ ಹಾಕಬೇಡಿ. ಕೊಡುಗೆ ಪತ್ರವನ್ನು (ಆಫರ್ ಡಾಕ್ಯುಮೆಂಟ್) ಮಾತ್ರ ಮೊದಲೇ ಸರಿಯಾಗಿ ಓದಿ ಖಚಿತಪಡಿಸಿಕೊಳ್ಳಿ, ಈ ವಿಚಾರದಲ್ಲಿ ನಿಮಗೆ ಮಾಹಿತಿ ಅಥವಾ ಅನುಭವ ಇಲ್ಲದೇ ಇದ್ದರೆ ತಜ್ಞರನ್ನು ವಿಚಾರಿಸಿ ಹಣ ಹೂಡಿರಿ. ಡೆಟ್ ಹಾಗೂ ಇಕ್ವಿಟಿ ಶೈಲಿಯ ಫಂಡ್ ಸಹವಾಸವೂ ಬೇಡ. ಬರೇ ಡೆಟ್ ಮಾರ್ಕೆಟ್ ಆಧಾರಿತ ಫಂಡ್ ಮಾತ್ರ ಆರಿಸಿಕೊಳ್ಳಿ. ಡೆಟ್ ಫಂಡ್‌ನಲ್ಲಿ ಫಿಕ್ಸೆಡ್ ಮೆಚ್ಯುರಿಟಿ ಪ್ಲಾನ್(ಎಫ್‌ಎಂಪಿ) ಅನ್ನೇ ಆರಿಸಿಕೊಳ್ಳಿರಿ.

ಸುಧಾಕರ ಮುತ್ತುರಾಜ, ಬೀದರ್
ಪ್ರಶ್ನೆ: ನಾನೂ ಸಹ ವಾಣಿಜ್ಯ ಪುರವಣಿಯಲ್ಲಿ ಯು.ಪಿ.ಪುರಾಣಿಕ್ ಅವರ ಉತ್ತರಗಳಿಂದ ಪ್ರಭಾವಿತ. ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ. ವಯಸ್ಸು 35. ಮಾಸಿಕ ವೇತನರೂ15,550. ಕೆಜಿಐಡಿಗೆರೂ 1,220, ಎನ್‌ಪಿಎಸ್‌ಗೆರೂ1,455, ಆರ್‌ಡಿ(ಎಸ್.ಬಿ.ಐ)ಗೆರೂ2,500 ಸಂಬಳದಿಂದ ಕಡಿತವಾಗುತ್ತದೆ. ಬೇರೆ ಮೂಲಗಳಿಂದಲೂ ಸ್ವಲ್ಪ ವರಮಾನವಿದೆ. ಆದ್ದರಿಂದ ಉಳಿದರೂ9,465ರಲ್ಲಿ ಕೆಜಿಐಡಿ ಮಾಸಿಕ ಕಂತು ಹೆಚ್ಚಿಸಲು ಯೋಚಿಸುತ್ತಿರುವೆ. ನನ್ನ ಸ್ನೇಹಿತರು ಪಿಎಲ್‌ಐ ಉತ್ತಮ ಎನ್ನುತ್ತಾರೆ. ಕೆಜಿಐಡಿ ಹಾಗೂ ಪಿಎಲ್‌ಐ ಇವೆರಡರಲ್ಲಿ ಯಾವುದು ಉತ್ತಮ ಹಾಗೂ ಲಾಭದಾಯಕ? ಕೆಜಿಐಡಿ ಹಾಗೂ ಪಿಎಲ್‌ಐನಲ್ಲಿ ರೂ. ಒಂದು ಲಕ್ಷಕ್ಕೆ ವಾರ್ಷಿಕ ಬೋನಸ್ ಎಷ್ಟು ಕೊಡುತ್ತಾರೆ. ಬ್ಯಾಂಕ್ ಆರ್‌ಡಿಗಿಂತ ಪಿಎಲ್‌ಐ ಉತ್ತಮವೇ?


ಉತ್ತರ: ನೀವು ಪ್ರತಿ ತಿಂಗಳೂ ಕೆಜಿಐಡಿ ಹಾಗೂ ಪಿಎಲ್‌ಐಗೆರೂ 2,130 ತುಂಬುತ್ತಿದ್ದೀರಿ. ಇದು ನಿಮ್ಮ ಆದಾಯದ ಶೇ 13.69ರಷ್ಟಿದೆ. ನಿಮಗೆ ಬರುವ ಬೇರೆ ಆದಾಯ ಎಷ್ಟು ಎಂಬುದನ್ನು ತಿಳಿಸಿಲ್ಲ. ಕೆಜಿಐಡಿ ಹಾಗೂ ಪಿಎಲ್‌ಐ ಎರಡೂ ಉತ್ತಮ ಸಂಸ್ಥೆಗಳೆ. ನೀವು ಇನ್ನೂ ಹೆಚ್ಚಿನ ವಿಮೆ ಮಾಡುವುದಾದರೆ ಈಗ ತುಂಬುತ್ತಿರುವ ಎರಡು ಕಂಪೆನಿಗಳ ಪ್ರೀಮಿಯಂ ಹೊರತುಪಡಿಸಿ ತಿಂಗಳಿಗೆ ಗರಿಷ್ಠರೂ2,000 ಮೊತ್ತಕ್ಕೆ ಪಿಎಲ್‌ಐದಲ್ಲಿ ಮತ್ತೊಂದು ಪಾಲಿಸಿ ಮಾಡಿಸಿರಿ.

ಈ ಎರಡೂ ಕಂಪೆನಿಗಳು ಪ್ರತಿ ಸಾವಿರ ರೂಪಾಯಿಗೆ ನಿರ್ದಿಷ್ಟವಾಗಿ ಎಷ್ಟು ಬೋನಸ್ ಪ್ರತಿ ಕೊಡುತ್ತಾರೆ ಎನ್ನುವುದನ್ನು ಮುಂಚಿತಗವಾಗಿಯೇ ಹೇಳಲು ಸಾಧ್ಯವಿಲ್ಲ. ಬೋನಸ್ ಘೋಷಣೆ ಆಯಾ ವರ್ಷ ಗಳಿಸಿದ ಲಾಭವನ್ನು ಹೊಂದಿಕೊಂಡಿರುತ್ತದೆ. ಪ್ರತಿ ವರ್ಷ ಘೋಷಿಸುವ ಬೋನಸ್ ಪ್ರಮಾಣವನ್ನು ಪ್ರೀಮಿಯಂ ನೋಟೀಸಿನಲ್ಲಿ ಪಾಲಿಸಿದಾರರಿಗೆ ತಿಳಿಸುತ್ತಾರೆ. ಈವರೆಗೆ ಜಮಾ ಇರುವ ಮೊತ್ತವನ್ನೂ ತಿಳಿಸುತ್ತಾರೆ.ಆರ್.ಡಿ ಕ್ರಮಬದ್ಧವಾದ ಉಳಿತಾಯ ಯೋಜನೆ. ಪಿಎಲ್‌ಐ ಒಂದು ವಿನಿಯೋಜನೆ. ಉಳಿತಾಯದ ದೃಷ್ಟಿಯಲ್ಲಿ ಆರ್‌ಡಿ ಹಾಗೂ ವಿಮೆ ದೃಷ್ಟಿಯಿಂದ ಪಿಎಲ್‌ಐ ಉತ್ತಮ.

ವೀರಣ್ಣಗೌಡ, ಊರು ಬೇಡ
ಪ್ರಶ್ನೆ: ನಾನೊಬ್ಬ ಕೃಷಿಕ. ಪಿತ್ರಾರ್ಜಿತ ಆಸ್ತಿಯಿಂದ ನನಗೆ ಬಂದ ಕೆಲವು ನಿವೇಶನಗಳನ್ನು ಕಾರಣಾಂತರಗಳಿಂದ ಮಾರಾಟ ಮಾಡಬೇಕಾಯಿತು. ಇದರಿಂದರೂ40 ಲಕ್ಷ ಬಂದಿದೆ. ಈ ಹಣದಿಂದ 100 ರಾಸುಗಳ ಹೈಟೆಕ್ ಡೇರಿ ಪ್ರಾರಂಭಿಸಬೇಕೆಂದಿದ್ದೇನೆ. ಪ್ರತಿ ದಿವಸರೂ5000 ಲಾಭ ಬರುವ ಅಂದಾಜಿದ್ದು, ಈ ಹಣವನ್ನು ಉಳಿತಾಯ ಖಾತೆಯಲ್ಲಿಡಬೇಕೆಂದಿದ್ದೇನೆ. ಆದರೆ ಉಳಿತಾಯ ಖಾತೆಯಲ್ಲಿರೂ2 ಲಕ್ಷ ದಾಟಿದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ ಎಂಬುದನ್ನೂ ಕೇಳಿದ್ದೇನೆ. ಹಾಗಾದರೆ ತೆರಿಗೆ ಉಳಿಸಲು ಏನು ಮಾಡಬೇಕು? ಬ್ಯಾಂಕಿನಲ್ಲಿ ಯಾವ ರೀತಿ ಖಾತೆಗಳಿವೆ? ದಯವಿಟ್ಟು ಸಲಹೆ ನೀಡಿ.


ಉತ್ತರ: ವೀರಣ್ಣಗೌಡರೇ, ನಿಮ್ಮ ಊರು, ವಯಸ್ಸು ತಿಳಿಸಿಲ್ಲ. ನಿಮ್ಮ ಪ್ರಶ್ನೆ ಓದಿದಾಗ, ನಿಮ್ಮ ಯೋಜನೆ ನೋಡಿದಾಗ ನಿಮಗೆ ಸಾಧಾರಣ 35 ವರ್ಷ ಆಗಿರಬಹುದು ಎಂದು ಭಾವಿಸುವೆ.ರೂ40 ಲಕ್ಷ ದೊಡ್ಡ ಮೊತ್ತ. ಈಗಾಗಲೇ ನಿಮ್ಮ ಕೈಸೇರಿದ ಈ ಹಣ ಎಲ್ಲಿ ತೊಡಗಿಸಿದ್ದೀರಿ ಎನ್ನುವುದೂ ತಿಳಿಯಲಿಲ್ಲ. ನಿಮ್ಮ ಪ್ರಶ್ನೆ ಪ್ರಕಾರ ನಿಮಗೆ ಬ್ಯಾಂಕ್‌ಗಳ ವಿಚಾರದಲ್ಲಿ ಅಥವಾ ಬ್ಯಾಂಕ್ ಠೇವಣಿ ಅಥವಾ ಖಾತೆ ವಿಚಾರದಲ್ಲಿ ಏನೂ ಮಾಹಿತಿ ಇದ್ದಂತೆ ಕಾಣುತ್ತಿಲ್ಲ.
ಲಕ್ಷ್ಮಿ ಚಂಚಲೆ. ನೀವು ಹೊಸ ಯೋಜನೆ ಆರಂಭಿಸುವ ಮೊದಲು ಬಂದಿರುವ ಹಣವನ್ನು ಯಾವುದಾದರೂ ಬ್ಯಾಂಕಿನ ಉಳಿತಾಯ ಖಾತೆ(ಎಸ್‌ಬಿ ಅಕೌಂಟ್)ಯಲ್ಲಿ ಭದ್ರವಾಗಿರಿಸಿ. ನಂತರ ಹೈಟೆಕ್ ಡೇರಿ ಯೋಜನೆಗೆ ಕೈಹಾಕಿ. ಉಳಿತಾಯ ಖಾತೆಯಲ್ಲಿ ವಾರ್ಷಿಕರೂ12,000ದವರೆಗೆ ಬಡ್ಡಿ ಬಂದಲ್ಲಿ ಆ ಮೊತ್ತಕ್ಕೆ ತೆರಿಗೆ ಇರುವುದಿಲ್ಲ. ಅದಕ್ಕಿಂತ ಹೆಚ್ಚು ಬಡ್ಡಿ ಬಂದರಷ್ಟೇ ತೆರಿಗೆ ಪಾವತಿಸಬೇಕಾಗುತ್ತದೆ.

ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹೊರತುಪಡಿಸಿ ಆರ್‌ಡಿ(ರಿಕರಿಂಗ್ ಡಿಪಾಸಿಟ್), ಅಂದರೆ ಪ್ರತಿ ತಿಂಗಳೂ ನಿಯಮಿತ ಮೊತ್ತವನ್ನು ಒಂದು ನಿಶ್ಚಿತ ಅವಧಿಯವರೆಗೂ ತುಂಬುವ ಠೇವಣಿ. ಎಫ್.ಡಿ ಎಂಬುದು ನಿರ್ಧಿಷ್ಟ ಅವಧಿಯ, ಆದರೆ ತುಸು ಹೆಚ್ಚು ಬಡ್ಡಿ ಒದಗಿಸುವ ಠೇವಣಿ. ಇಲ್ಲಿ 3, 6 ಅಥವಾ 12 ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದು. ಮರು ಹೂಡಿಕೆಯ ಅವಧಿ ಠೇವಣಿಯೊಂದಿದೆ. ಇದರಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಅಸಲಿಗೆ ಸೇರಿಸಿ, ಚಕ್ರ ಬಡ್ಡಿಯಂತೆ ಲೆಕ್ಕ ಹಾಕಿ ನಿಗದಿತ ಅವಧಿ ಮುಗಿಯುತ್ತಲೇ ಅಸಲು ಮತ್ತು ಬಡ್ಡಿಯನ್ನು ಒಮ್ಮೆಲೇ ನೀಡಲಾಗುತ್ತದೆ.

ನಿಮಗೊಂದು ಸಲಹೆ; ದೊಡ್ಡ ಯೋಜನೆಯನ್ನು ಒಮ್ಮೆಲೇ ಕೈಗೆತ್ತಿಕೊಳ್ಳುವಾಗ ಅಂತಹ ಯೋಜನೆ ಬಗ್ಗೆ ಅನುಭವ ಇಲ್ಲದೇ ಇದ್ದರೆ ಭಾರಿ ತೊಂದರೆ ಎದುರಿಸಬೇಕಾದೀತು. ನಿಮ್ಮಲ್ಲಿರುವ ದೊಡ್ಡ ಮೊತ್ತದಲ್ಲಿ ಶೇ 75ರಷ್ಟನ್ನು ಬ್ಯಾಂಕಿನಲ್ಲಿ ಅವಧಿ ಠೇವಣಿಯಲ್ಲಿ(ಎಫ್‌ಡಿ) ಇಟ್ಟು, ಉಳಿದರೂ10 ಲಕ್ಷದಿಂದ ಡೇರಿ ಆರಂಭಿಸಿ. ನಿಮ್ಮ ಅನುಭವ ಹಾಗೂ ವ್ಯವಹಾರ ಉತ್ತಮಗೊಂಡಲ್ಲಿ ಆ ಯೋಜನೆಯಲ್ಲಿ ಹಂತ ಹಂತವಾಗಿ ಹೂಡಿಕೆ ಹೆಚ್ಚಿಸುತ್ತಾ ಬನ್ನಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.