ADVERTISEMENT

ಫಲ ನೀಡದ ವಿಶೇಷ ವಹಿವಾಟು

1 ವರ್ಷದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹25 ಲಕ್ಷ ಕೋಟಿ ವೃದ್ಧಿ

ಪಿಟಿಐ
Published 19 ಅಕ್ಟೋಬರ್ 2017, 19:43 IST
Last Updated 19 ಅಕ್ಟೋಬರ್ 2017, 19:43 IST
ಫಲ ನೀಡದ ವಿಶೇಷ ವಹಿವಾಟು
ಫಲ ನೀಡದ ವಿಶೇಷ ವಹಿವಾಟು   

ಮುಂಬೈ: ಒಂದು ಗಂಟೆಗಳ ಅವಧಿಯ ಮುಹೂರ್ತದ ವಹಿವಾಟು ದೇಶದ ಷೇರುಪೇಟೆಗಳಲ್ಲಿ ಚೇತರಿಕೆ ನೀಡಲು ವಿಫಲವಾಯಿತು.

ಗುರುವಾರ 6.30 ರಿಂದ 7.30ರವರೆಗೆ ಒಂದು ಗಂಟೆ ಅವಧಿಯಲ್ಲಿ ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಾಣುವುದರೊಂದಿಗೆ ವಿಶೇಷ ವಹಿವಾಟು ಅಂತ್ಯವಾಯಿತು.

ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿದ್ದರಿಂದ ಸೂಚ್ಯಂಕಗಳು ಇಳಿಕೆ ಕಂಡಿವೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 194 ಅಂಶ ಇಳಿಕೆ ಕಂಡು, 32,389 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. ಹಿಂದಿನ ಎರಡು ದಿನಗಳ ವಹಿವಾಟಿನಲ್ಲಿಯೂ ಸೂಚ್ಯಂಕ 29 ಅಂಶ ಇಳಿಕೆಯಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 64 ಅಂಶ ಇಳಿಕೆಯಾಗಿ 10,146 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸಂಪತ್ತು ವೃದ್ಧಿ: ಹಿಂದಿನ ವರ್ಷದ ದೀಪಾವಳಿಯಿಂದ ಈ ವರ್ಷದ ದೀಪಾವಳಿ ಅವಧಿಯಲ್ಲಿ  (ಅ.18ರ ಅಂತ್ಯಕ್ಕೆ) ಬಿಎಸ್‌ಇ ಶೇ 16.6ರಷ್ಟು ಏರಿಕೆ ಕಂಡಿದೆ. ಇದರಿಂದ ಮಾರುಕಟ್ಟೆ ಮೌಲ್ಯದಲ್ಲಿ ಹೂಡಿಕೆದಾರರ ಸಂಪತ್ತು ₹25 ಲಕ್ಷ ಕೋಟಿಯಷ್ಟು ವೃದ್ಧಿಯಾಗಿದೆ.

ಬಿಎಸ್‌ಇ ಸೂಚ್ಯಂಕ ಒಂದು ವರ್ಷದ ವಹಿವಾಟು ಅವಧಿಯಲ್ಲಿ 4,642 ಅಂಶಗಳಷ್ಟು ಏರಿಕೆ ಕಂಡಿದ್ದು, ಬುಧವಾರದ ಅಂತ್ಯಕ್ಕೆ 32,584 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಎನ್‌ಎಸ್‌ಇ ನಿಫ್ಟಿ ಒಂದು ವರ್ಷದಲ್ಲಿ 1,572 ಅಂಶ ಹೆಚ್ಚಾಗಿ 10,210 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ವಸೂಲಿಯಾಗದ ಸಾಲದ ಪ್ರಮಾಣ (ಎನ್‌ಪಿಎ) ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಬ್ಯಾಂಕಿಂಗ್ ಪ್ರಗತಿಗೆ ಅಡ್ಡಿಯಾಗಿದೆ. ಇದರಿಂದ ಬ್ಯಾಂಕ್ ಷೇರುಗಳು ಹೆಚ್ಚಿನ ಒತ್ತಡದಲ್ಲಿವೆ. ಆದರೆ ಮುಂದಿನ ದಿನಗಳಲ್ಲಿ ಜಿಎಸ್‌ಟಿಗೆ ಸಂಬಂಧಿಸಿದ ಸಕಾರಾತ್ಮಕ ಅಂಶಗಳು ಷೇರುಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು ಜಿಜೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಮಾರುಕಟ್ಟೆ ವಿಶ್ಲೇಷಕ ಆನಂದ ಜೇಮ್ಸ್ ಹೇಳಿದ್ದಾರೆ.

ಬಲಿಪಾಡ್ಯಮಿ ಇರುವುದರಿಂದ ಶುಕ್ರವಾರ ವಹಿವಾಟಿಗೆ ರಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.