ADVERTISEMENT

ಫ್ಲಿ‍ಪ್‌ಕಾರ್ಟ್‌ ಸ್ವಾಧೀನ: ಅಂತಿಮ ಚರ್ಚೆ

ಶೇ 75ರಷ್ಟು ಪಾಲು ಮಾರಾಟಕ್ಕೆ ಆಡಳಿತ ಮಂಡಳಿ ನಿರ್ಧಾರ?

ಪಿಟಿಐ
Published 4 ಮೇ 2018, 19:30 IST
Last Updated 4 ಮೇ 2018, 19:30 IST
ಫ್ಲಿ‍ಪ್‌ಕಾರ್ಟ್‌ ಸ್ವಾಧೀನ: ಅಂತಿಮ ಚರ್ಚೆ
ಫ್ಲಿ‍ಪ್‌ಕಾರ್ಟ್‌ ಸ್ವಾಧೀನ: ಅಂತಿಮ ಚರ್ಚೆ   

ನವದೆಹಲಿ: ಅಮೆರಿಕದ ರಿಟೇಲ್‌ ದೈತ್ಯ ಸಂಸ್ಥೆ ವಾಲ್‌ಮಾರ್ಟ್‌, ದೇಶದ ಅತಿದೊಡ್ಡ ಇ–ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಖರೀದಿಸುವುದಕ್ಕೆ ಸಂಬಂಧಿಸಿದ ಮಾತುಕತೆ ಈಗ ಅಂತಿಮ ಸುತ್ತಿಗೆ ತಲುಪಿದೆ.

ವಾಲ್‌ಮಾರ್ಟ್‌, ಫ್ಲಿಪ್‌ಕಾರ್ಟ್‌ನಲ್ಲಿ ಶೇ 72 ರಿಂದ ಶೇ 73ರಷ್ಟು ಪಾಲು ಖರೀದಿಸಲಿದೆ. ಸ್ವಾಧೀನ ಪ್ರಕ್ರಿಯೆಯ ವಿವರಗಳು ಕೆಲವೇ ದಿನಗಳಲ್ಲಿ ಪ್ರಕಟವಾಗಲಿವೆ ಎಂದು ಮೂಲಗಳು ತಿಳಿಸಿವೆ.

ಶೇ 75ರಷ್ಟು ಪಾಲು ಬಂಡವಾಳವನ್ನು ವಾಲ್‌ಮಾರ್ಟ್‌ಗೆ ಮಾರಾಟ ಮಾಡಲು ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಸರ್ವಿಸಸ್‌ನ ಆಡಳಿತ ಮಂಡಳಿ ಸಮ್ಮತಿ ನೀಡಿದೆ. ಮಾರಾಟ ವಹಿವಾಟಿನ ಮೊತ್ತ ₹ 97,500 ಕೋಟಿಗಳಷ್ಟು ಇರಲಿದೆ.

ADVERTISEMENT

ಈ ಖರೀದಿ ಒಪ್ಪಂದದ ಪ್ರಕಾರ, ವಾಲ್‌ಮಾರ್ಟ್‌, ಫ್ಲಿಪ್‌ಕಾರ್ಟ್‌ನ ವಿವಿಧ ಹೂಡಿಕೆದಾರ ಸಂಸ್ಥೆಗಳ ಪಾಲು ಖರೀದಿಸಲಿದೆ. ಟೈಗರ್‌ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌ ಮತ್ತು ಸಾಫ್ಟ್‌ಬ್ಯಾಂಕ್‌ನ ಷೇರುಗಳನ್ನು ಖರೀದಿಸುವ ಸಾಧ್ಯತೆ ಇದೆ.

ವಾಲ್‌ಮಾರ್ಟ್‌ ಜತೆಗಿನ ಈ ವಿಲೀನ ಒಪ್ಪಂದ ಅಂತಿಮಗೊಳ್ಳುತ್ತಿದ್ದಂತೆ, ಫ್ಲಿಪ್‌ಕಾರ್ಟ್‌ನ ಸಹ ಸ್ಥಾಪಕ ಸಚಿನ್ ಬನ್ಸಲ್‌ ಅವರು ಸಂಸ್ಥೆ ತೊರೆಯಲಿದ್ದಾರೆ ಎಂದೂ ವರದಿಯಾಗಿದೆ. ಆದರೆ, ಈ ಸುದ್ದಿ ಇನ್ನೂ ಖಚಿತಪಟ್ಟಿಲ್ಲ. ಸಚಿನ್‌ ಅವರು ಬಿನ್ನಿ ಬನ್ಸಲ್‌ ಜತೆ ಸೇರಿಕೊಂಡು 2007ರಲ್ಲಿ ಫ್ಲಿಪ್‌ಕಾರ್ಟ್‌ ಸ್ಥಾಪಿಸಿದ್ದರು.

ಇವರಿಬ್ಬರೂ ಸಂಬಂಧಿಕರಲ್ಲ. ಇಬ್ಬರೂ ಸಂಸ್ಥೆಯಲ್ಲಿ ತಲಾ ಶೇ 5ರಷ್ಟು ಪಾಲು ಬಂಡವಾಳ ಹೊಂದಿದ್ದಾರೆ. ಸದ್ಯಕ್ಕೆ ಫ್ಲಿಪ್‌ಕಾರ್ಟ್‌ನ ಮೌಲ್ಯವು ₹ 1.30 ಲಕ್ಷ ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

ಒಪ್ಪಂದದ ಅಡಿ, ಸಾಫ್ಟ್‌ಬ್ಯಾಂಕ್‌ ಗ್ರೂಪ್‌ ಕಾರ್ಪೊರೇಷನ್‌, ಫ್ಲಿಪ್‌ಕಾರ್ಟ್‌ನಲ್ಲಿನ ತನ್ನ ಶೇ 20ರಷ್ಟು ಪಾಲು ಬಂಡವಾಳವನ್ನು ಮಾರಾಟ ಮಾಡಲಿದೆ. ಒಪ್ಪಂದದ ಚಿತ್ರಣವು 10 ದಿನಗಳಲ್ಲಿ ಅಂತಿಮಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.