ADVERTISEMENT

ಬಂಡವಾಳ ಹೂಡಿಕೆ: ರಾಜ್ಯಕ್ಕೆ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಭಾನುವಾರ ಶಂಕುಸ್ಥಾಪನೆಯಾದ ಕೆಐಎಡಿಬಿ ಪ್ರಧಾನ ಕಚೇರಿ ಕಟ್ಟಡದ ಮಾದರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಇನ್ಫೊಸಿಸ್‌ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆರ್. ಸಂಪತ್ ರಾಜ್ ಇದ್ದರು. -ಪ್ರಜಾವಾಣಿ ಚಿತ್ರ
ಭಾನುವಾರ ಶಂಕುಸ್ಥಾಪನೆಯಾದ ಕೆಐಎಡಿಬಿ ಪ್ರಧಾನ ಕಚೇರಿ ಕಟ್ಟಡದ ಮಾದರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಇನ್ಫೊಸಿಸ್‌ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆರ್. ಸಂಪತ್ ರಾಜ್ ಇದ್ದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಉದ್ಯಮ ವಲಯಕ್ಕೆ ಬಂಡವಾಳ ಸೆಳೆಯುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ(ಕೆಐಎಡಿಬಿ) ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವ ಉದ್ಯಮಿಗಳಿಗೆ ಸಮರ್ಪಕ ಮೂಲ ಸೌಕರ್ಯ ಕಲ್ಪಿಸಿರುವುದರಿಂದ ಹೆಚ್ಚಿನ ಬಂಡವಾಳ ಆಕರ್ಷಿಸಲು ಸಾಧ್ಯವಾಗಿದೆ’ ಎಂದರು.

"ಐದು ಲಕ್ಷ ನಿರುದ್ಯೋಗಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿಯನ್ನೂ ರಾಜ್ಯ ಸರ್ಕಾರ ನೀಡುತ್ತಿದೆ. ದಲಿತರು, ಮಹಿಳೆಯರು ಹಾಗೂ ‌ಹಿಂದುಳಿದ ವರ್ಗದವರು ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ನೆರವಾಗುವಂತೆ ಹೊಸ ನೀತಿ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಕೆಐಎಡಿಬಿ ಪ್ರಮುಖ ಪಾತ್ರ ವಹಿಸಿದ್ದು, 165 ಕೈಗಾರಿಕಾ ಪ್ರದೇಶಗಳನ್ನು ಈ ಮಂಡಳಿ ಅಭಿವೃದ್ಧಿಪಡಿಸಿದೆ.

ADVERTISEMENT

ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮಾತನಾಡಿ, ‘ಚೀನಾದಲ್ಲಿ ಕೈಗಾರಿಕೆ ಆರಂಭಿಸಲು ಮುಂದಾಗುವ ನವೋದ್ಯಮಿಗಳು ಜಮೀನು ಕೋರಿ ಅರ್ಜಿ ಸಲ್ಲಿಸಿದರೆ ಒಂದೇ ದಿನದಲ್ಲಿ ಮಂಜೂರು ಮಾಡಲಾಗುತ್ತಿದೆ. ಈ ರೀತಿಯ ವೇಗ ಮತ್ತು ಪಾರದರ್ಶಕತೆಯನ್ನು ಕೆಐಎಡಿಬಿ ಹೆಚ್ಚಿಸಿಕೊಂಡರೆ ದೇಶದಲ್ಲಿ ಮಾತ್ರವಲ್ಲ ಜಾಗತಿಕವಾಗಿ ನಂಬರ್ 1 ಸ್ಥಾನ ಪಡೆಯಲಿದೆ’ ಎಂದು ಅಭಿಪ್ರಾಯಪಟ್ಟರು.

ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಡೆ ಮಾತನಾಡಿ,  ‘ಬಂಡವಾಳ ಹೂಡಿಕೆದಾರರು ನಮ್ಮ ಅತಿಥಿಗಳಿದ್ದಂತೆ. ಅವರಿಗೆ ತೊಂದರೆಯಾಗದಂತೆ  ಸರ್ಕಾರ ನೋಡಿಕೊಳ್ಳುತ್ತಿದೆ. ಈ ಕಾರಣದಿಂದ ರಾಜ್ಯಕ್ಕೆ ಐದು ವರ್ಷದಲ್ಲಿ ₹ 3,46 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ’ ಎಂದರು.

‘ಚೀನಾ ಮಾದರಿಯಲ್ಲಿ ಒಂದೇ ದಿನದಲ್ಲಿ ಭೂಮಿ ಮಂಜೂರು ಮಾಡಲು ನಾನು ಸಿದ್ಧನಿದ್ದೇನೆ. ಉದ್ಯಮಿಗಳು ಮತ್ತು ಕೆಐಎಡಿಬಿ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಬೇಡಿಕೆ ಇಲ್ಲದಿದ್ದರೂ ಕೈಗಾರಿಕಾಭಿವೃದ್ಧಿ ಪ್ರದೇಶದ ಹೆಸರಿನಲ್ಲಿ ರೈತರ ಭೂಮಿಯನ್ನು ಅನಗತ್ಯವಾಗಿ ಸ್ವಾಧೀನ ಮಾಡಿಕೊಳ್ಳುವುದು ತಪ್ಪು. ಅದಕ್ಕೆ ಕಡಿವಾಣ ಹಾಕಲಾಗಿದೆ’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.