ADVERTISEMENT

ಬಜೆಟ್ ಪ್ರಭಾವ: ಏರಿಳಿತ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ, ಕೇಂದ್ರ ಬಜೆಟ್, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಕಟಿಸಲಿರುವ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಸೇರಿದಂತೆ ಹಲವು ಸಂಗತಿಗಳು ಮುಂದಿನ ದಿನಗಳಲ್ಲಿ ಷೇರು ಪೇಟೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂದಿನ 10ರಿಂದ 15 ದಿನಗಳ ವರೆಗೆ ಈ ಮೇಲಿನ ಸಂಗತಿಗಳ ತೀವ್ರ ಪ್ರಭಾವ ಇರುತ್ತದೆ. ಇದರ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಿರುವುದೂ ಕೂಡ ಪೇಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾದ ಸಂಗತಿ ಎಂದು ಅಂದಾಜಿಸಲಾಗಿದೆ.ಮಾರ್ಚ್ 6ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. 15 ರಂದು `ಆರ್‌ಬಿಐ~ ಹಣಕಾಸು ಪರಾಮರ್ಶೆ ಪ್ರಕಟಿಸಲಿದೆ. ಇದರ  ಬೆನ್ನ ಹಿಂದೆಯೇ ಮಾರ್ಚ್ 16ರಂದು ಕೆಂದ್ರ ಬಜೆಟ್ ಮಂಡನೆಯಾಗಲಿದೆ. ಇವು ವಹಿವಾಟಿನ ತೀವ್ರ ಏರಿಳಿತಕ್ಕೆ ಕಾರಣವಾಗಬಹುದು ಎಂದು ಜಿಯೊಜಿತ್ ಬಿಎನ್‌ಪಿ ಹಣಕಾಸು ಸಂಸ್ಥೆಯ ಮುಖ್ಯಸ್ಥ ಅಲೆಕ್ಸ್ ಮಾಥ್ಯೂಸ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರಾಂತ್ಯದ ವೇಳೆಗೆ ಸೂಚ್ಯಂಕ ಶೇ 1.6ರಷ್ಟು ಇಳಿಕೆ ಕಂಡಿದ್ದು, 17,636 ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) 2 ವರ್ಷಗಳ ಹಿಂದಿನ ಮಟ್ಟ ಶೇ 6.1ಕ್ಕೆ ಕುಸಿದಿರುವುದು ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.