ADVERTISEMENT

ಬಡ್ಡಿದರ ಬದಲಿಸದ ಆರ್‌ಬಿಐ

ರೆಪೊ, ರಿವರ್ಸ್‌ ರೆಪೊ ದರಗಳಲ್ಲಿ ಯಥಾಸ್ಥಿತಿ

ಪಿಟಿಐ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST
ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್‌ ಅವರು ಡೆಪ್ಯುಟಿ ಗವರ್ನರ್‌ಗಳಾದ ಬಿ.ಪಿ. ಕನುಂಗೊ, ಎನ್‌. ಎಸ್‌. ವಿಶ್ವನಾಥನ್‌, ವಿರಲ್‌ ಆಚಾರ್ಯ ಅವರೊಂದಿಗೆ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು – ಪಿಟಿಐ ಚಿತ್ರ
ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್‌ ಅವರು ಡೆಪ್ಯುಟಿ ಗವರ್ನರ್‌ಗಳಾದ ಬಿ.ಪಿ. ಕನುಂಗೊ, ಎನ್‌. ಎಸ್‌. ವಿಶ್ವನಾಥನ್‌, ವಿರಲ್‌ ಆಚಾರ್ಯ ಅವರೊಂದಿಗೆ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು – ಪಿಟಿಐ ಚಿತ್ರ   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌, ನಿರೀಕ್ಷೆಯಂತೆ ತನ್ನ ಪ್ರಮುಖ ಬಡ್ಡಿ ದರಗಳಲ್ಲಿ ಈ ಬಾರಿಯೂ ಯಥಾಸ್ಥಿತಿ ಕಾಯ್ದುಕೊಂಡಿದೆ.

ಗವರ್ನರ್‌ ಉರ್ಜಿತ್ ಪಟೇಲ್‌ ನೇತೃತ್ವದಲ್ಲಿನ  6 ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿಯು ತನ್ನ ಐದನೇ ದ್ವೈಮಾಸಿಕ ಪರಾಮರ್ಶೆಯಲ್ಲಿ ರೆಪೊ ದರ (ಶೇ 6) ಮತ್ತು ರಿವರ್ಸ್‌ ರೆಪೊ (ಶೇ 5.75) ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರಿಂದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಗದುತನದ ಹರಿವು ಹೆಚ್ಚುವುದಿಲ್ಲ. ಜತೆಗೆ ಗೃಹ, ವಾಹನ ಖರೀದಿ ಮತ್ತು ವೈಯಕ್ತಿಕ ಸಾಲಗಳ ಬಡ್ಡಿದರಗಳು ಕಡಿಮೆ ಆಗುವ ಸಾಧ್ಯತೆಯೂ ಇರುವುದಿಲ್ಲ.

ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದರ ಜತೆಗೆ ಗ್ರಾಹಕರ ಬೆಲೆ ಸೂಚ್ಯಂಕವನ್ನು (ಸಿಪಿಐ) ಶೇ 4ರ ಮಿತಿಯಲ್ಲಿ ಇರಿಸುವ ಮಧ್ಯಂತರ ಗುರಿ ಸಾಧಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಾರಣ ನೀಡಿದೆ. ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರ ಮುನ್ನೋಟವನ್ನೂ (ಶೇ 6.7) ಬದಲಿಸಲು ಕೇಂದ್ರೀಯ ಬ್ಯಾಂಕ್‌ ಮುಂದಾಗಿಲ್ಲ.

ADVERTISEMENT

2017–18ರ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.3 ರಿಂದ ಶೇ 4.7ರಷ್ಟು ಇರಲಿದೆ ಎಂದೂ ಆರ್‌ಬಿಐ ಅಂದಾಜಿಸಿದೆ. ಇದು ಈ ಮೊದಲಿನ ಅಂದಾಜಿಗಿಂತ ಹೆಚ್ಚಿಗೆ ಇರಲಿದೆ.

7ನೇ ವೇತನ ಆಯೋಗದ ಶಿಫಾರಸುಗಳ ಜಾರಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿದ ಮನೆ ಬಾಡಿಗೆ ಭತ್ಯೆ ಕಾರಣಕ್ಕೆ ಅಲ್ಪಾವಧಿಯಲ್ಲಿ ಹಣದುಬ್ಬರ ಏರುಗತಿಯಲ್ಲಿ ಇರಲಿದೆ.

ಡಿಜಿಟಲ್‌ ಪಾವತಿಗೆ ಉತ್ತೇಜನ: ನಗದು ರಹಿತ ವಹಿವಾಟು ಉತ್ತೇಜಿಸಲು ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಕೆಗೆ ವಿಧಿಸುವ ಶುಲ್ಕ ಕಡಿಮೆ ಮಾಡಲೂ ಆರ್‌ಬಿಐ ಉದ್ದೇಶಿಸಿದೆ.

ಗ್ರಾಹಕರು ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸುವುದಕ್ಕೆ ಬ್ಯಾಂಕ್‌ಗಳು ವರ್ತಕರಿಗೆ ಒದಗಿಸುವ ಸೇವೆಗೆ ವಿಧಿಸುವ ಶುಲ್ಕದಲ್ಲಿ (ಮರ್ಚಂಟ್‌ ಡಿಸ್ಕೌಂಟ್‌ ರೇಟ್‌–ಎಂಡಿಆರ್‌) ಸುಧಾರಣೆ ತರಲಾಗುವುದು. ಸದ್ಯಕ್ಕೆ ವಹಿವಾಟಿನ ಮೊತ್ತ ಆಧರಿಸಿ ಶುಲ್ಕ ವಿಧಿಸಲಾಗುತ್ತಿದೆ. ಇದನ್ನು ವರ್ತಕರ ವಹಿವಾಟು ಆಧರಿಸಿ ವಿಧಿಸಲು ಆಲೋಚಿಸಲಾಗುತ್ತಿದೆ.

ಡೆಬಿಟ್‌ ಕಾರ್ಡ್‌ಗಳ ಬಳಕೆ ಹೆಚ್ಚಿಸುವುದು ಮತ್ತು ವರ್ತಕರು ಈ ವಹಿವಾಟು ಮುಂದುವರೆಸುವುದನ್ನು ಖಾತರಿ‍ಪಡಿಸುವುದು ಇದರ ಉದ್ದೇಶವಾಗಿದೆ.

ವಿತ್ತೀಯ ಕೊರತೆ ಹೆಚ್ಚ‌ಳ

ಹಲವಾರು ಸರಕು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿ ದರಗಳಲ್ಲಿ ಕಡಿತ, ಪೆಟ್ರೋಲಿಯಂ ಉತ್ಪನ್ನಗಳ  ಅಬಕಾರಿ ಸುಂಕ ಇಳಿಕೆ ಮತ್ತು ಕೆಲ ರಾಜ್ಯ ಸರ್ಕಾರಗಳು ಕೃಷಿ ಸಾಲ ಮನ್ನಾ ಮಾಡಿರುವುದರಿಂದ  ಸರ್ಕಾರದ ವಿತ್ತೀಯ ಕೊರತೆ ಹೆಚ್ಚಳಗೊಳ್ಳಲಿದೆ ಎಂದು ಆರ್‌ಬಿಐ ಎಚ್ಚರಿಸಿದೆ.

ಏಳು ರಾಜ್ಯಗಳು ಪ್ರಕಟಿಸಿರುವ ಒಟ್ಟು ₹ 88 ಸಾವಿರ ಕೋಟಿಗಳ ಕೃಷಿ ಸಾಲ ಮನ್ನಾದಿಂದ ಹಣದುಬ್ಬರವು ಶಾಶ್ವತವಾಗಿ ಶೇ 0.2ರಷ್ಟು ಏರಿಕೆ ಕಾಣಲಿದೆ. ತೈಲೋತ್ಪನ್ನಗಳ ಮೇಲಿನ ಸುಂಕ ಕಡಿತದಿಂದ ಕೇಂದ್ರ ಸರ್ಕಾರಕ್ಕೆ ₹ 13 ಸಾವಿರ ಕೋಟಿ ನಷ್ಟವಾಗಲಿದೆ.

ಉದ್ಯಮಕ್ಕೆ ನಿರಾಶೆ

ಬಡ್ಡಿ ದರ ಕಡಿತ ಮಾಡದ ಆರ್‌ಬಿಐ ನಿಲುವಿಗೆ ದೇಶಿ ಕೈಗಾರಿಕಾ ವಲಯ ತನ್ನ ತೀವ್ರ ನಿರಾಶೆ ವ್ಯಕ್ತಪಡಿಸಿದೆ.

‘ಅಗ್ಗದ ಬಡ್ಡಿ ದರಗಳ ಮೂಲಕ ಬೇಡಿಕೆ ಪುನಶ್ಚೇತನಗೊಳಿಸುವ ಮತ್ತು ಬಂಡವಾಳ ಹೂಡಿಕೆ ಹೆಚ್ಚಿಸುವ ಅಗತ್ಯ ಈಗ ಹೆಚ್ಚಿಗೆ ಇರುವಾಗ ಆರ್‌ಬಿಐ ಅದಕ್ಕೆ ಪೂರಕ ಕ್ರಮ ಪ್ರಕಟಿಸದಿರುವುದು ಸರಿಯಲ್ಲ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮಹಾ ನಿರ್ದೇಶಕ ಚಂದ್ರಜೀತ್‌ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

6 % : ಬದಲಾಗದ ರೆಪೊ ದರ

4.3 ರಿಂದ 4.7 %: ಹಣದುಬ್ಬರ ಹೆಚ್ಚಳ ನಿರೀಕ್ಷೆ

6.7 %: ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರ ಅಂದಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.