ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೆಪ್ಟೆಂಬರ್ 16ರಂದು ಹಣಕಾಸು ನೀತಿಯ ತನ್ನ ತ್ರೈಮಾಸಿಕ ಮಧ್ಯಂತರ ಪರಾಮರ್ಶೆ ಪ್ರಕಟಿಸಲಿದ್ದು, ಮತ್ತೊಂದು ಸುತ್ತಿನ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆಗಳು ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ ತಿಂಗಳ ಸಗಟು ಬೆಲೆ ಸೂಚ್ಯಂಕ ಅಧರಿಸಿದ ಒಟ್ಟಾರೆ ಹಣದುಬ್ಬರ ದರ ಸೆಪ್ಟೆಂಬರ್ 14ರಂದು ಪ್ರಕಟಗೊಳ್ಳಲಿದೆ. ಸೆಪ್ಟೆಂಬರ್ ಮೊದಲ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ಒತ್ತಡವು ಅಲ್ಪಮಟ್ಟಿಗೆ ತಗ್ಗಿದ್ದರೂ, ಆಹಾರೇತರ ಪದಾರ್ಥಗಳು ಮತ್ತು ಪ್ರಾಥಮಿಕ ಸರಕುಗಳ ಬೆಲೆಗಳು ಗರಿಷ್ಠ ಮಟ್ಟದಲ್ಲಿಯೇ ಇವೆ. ಈ ಹಿನ್ನೆಲೆಯಲ್ಲಿ `ಆರ್‌ಬಿಐ~ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ಹೆಚ್ಚಿಸಬಹುದು ಎಂದು `ಕ್ರಿಸಿಲ್~ನ ಹಿರಿಯ ಅರ್ಥಶಾಸ್ತ್ರಜ್ಞ ಡಿ.ಕೆ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಜುಲೈ ತಿಂಗಳಲ್ಲಿ ಸಗಟು ಸೂಚ್ಯಂಕ ಆಧರಿಸಿದ ಹಣದುಬ್ಬರ ದರ ಶೇ 9.22ರಷ್ಟಿತ್ತು. ಇದು ಕಳೆದ ಡಿಸೆಂಬರ್ ತಿಂಗಳಿಂದಲೂ ಶೇ 9ಕ್ಕಿಂತ ಕೆಳಗೆ ಇಳಿದಿಲ್ಲ. ಹಣದುಬ್ಬರ ನಿಯಂತ್ರಿಸಲು `ಆರ್‌ಬಿಐ~ ಮಾರ್ಚ್ 2010ರಿಂದ 11 ಬಾರಿ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಹೆಚ್ಚಿಸಿದೆ. ಆದರೆ, ಬಡ್ಡಿ ದರ ಹೆಚ್ಚಳದಿಂದ ತಯಾರಿಕಾ ಕ್ಷೇತ್ರದ ಒಟ್ಟಾರೆ ಪ್ರಗತಿ ಕುಸಿದಿದ್ದು, ಏಪ್ರಿಲ್-ಜೂನ್ ಅವಧಿಯಲ್ಲಿ ಆರ್ಥಿಕ ಪ್ರಗತಿ ಶೇ 7.7ರಷ್ಟಾಗಿದೆ. ಇದು ಕಳೆದ ಆರು ತ್ರೈಮಾಸಿಕ ಅವಧಿಗಳಲ್ಲಿ ಕನಿಷ್ಠ ಪ್ರಗತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.