ADVERTISEMENT

ಬಡ್ಡಿ ದರ: ಕಾರು ಮಾರಾಟ ಕುಸಿತ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ, ಆಗಸ್ಟ್ ತಿಂಗಳಲ್ಲಿ ಕಾರುಗಳ ಮಾರಾಟ ಶೇ 10ರಷ್ಟು ಕುಸಿತ ಕಂಡಿದೆ ಎಂದು  ಭಾರತೀಯ ವಾಹನ ತಯಾರಕರ ಸಂಘ (ಎಸ್‌ಐಎಎಂ) ಹೇಳಿದೆ.

ಗರಿಷ್ಠ ಬಡ್ಡಿ ದರ, ಹಣದುಬ್ಬರ ಒತ್ತಡ ಮತ್ತು ಕೆಲವು ಕಂಪೆನಿಗಳು ಕಾರು ತಯಾರಿಕೆ ತಗ್ಗಿಸಿರುವ ಕ್ರಮಗಳು ಕೂಡ ಒಟ್ಟು ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟು 1,60,713 ಕಾರುಗಳು ಮಾರಾಟವಾಗಿತ್ತು. ಆಗಸ್ಟ್ ತಿಂಗಳಲ್ಲಿ ಇದು 1,44,516ಕ್ಕೆ ಕುಸಿದಿದೆ ಎಂದು `ಎಸ್‌ಐಎಎಂ~ ಅಧ್ಯಕ್ಷ ವಿಷ್ಣು ಮಾಥುರ್ ಹೇಳಿದ್ದಾರೆ.

ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿಯ ಮಾನೇಸರ ತಯಾರಿಕಾ ಘಟಕದಲ್ಲಿ ಕಾರ್ಮಿಕರು ನಡೆಯುತ್ತಿರುವ ಪ್ರತಿಭಟನೆ ಕೂಡ ಮಾರಾಟದ ಮೇಲೆ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಕಾರು ಮಾರಾಟ ಹೆಚ್ಚುತ್ತದೆ, ಆದರೆ, ಸದ್ಯದ ಪರಿಸ್ಥಿತಿಗಳು ಮಾರುಕಟ್ಟೆಗೆ ಅನುಕೂಲವಾಗಿಲ್ಲ ಎಂದು ಮಾಥುರ್ ಅಭಿಪ್ರಾಯಪಟ್ಟಿದ್ದಾರೆ.

ಮಾರುತಿ ಸುಜುಕಿ: ಆಗಸ್ಟ್ ತಿಂಗಳಲ್ಲಿ ಮಾರುತಿ ಸಜುಕಿಯ ಒಟ್ಟು ಮಾರಾಟ ಶೇ 19ರಷ್ಟು ಕುಸಿತ ಕಂಡಿದೆ. ಕಳೆದ ವರ್ಷದ ಈ ಅವಧಿಯಲ್ಲಿ 78,351 ಕಾರುಗಳು ಮಾರಾಟವಾಗಿತ್ತು. ಆಗಸ್ಟ್‌ನಲ್ಲಿ ಇದು 63,296ಕ್ಕೆ ಇಳಿದಿದೆ.

ಹುಂಡೈ ಮೋಟಾರ್: ಕಂಪೆನಿಯು ಶೇ 8ರಷ್ಟು ಮಾರಾಟ ಕುಸಿತ ದಾಖಲಿಸಿದೆ. ಒಟ್ಟು 26,451 ಕಾರುಗಳು ಆಗಸ್ಟ್ ತಿಂಗಳಲ್ಲಿ ಮಾರಾಟವಾಗಿದೆ.

ಟಾಟಾ ಮೋಟಾರ್: ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟು 22,312 ಕಾರುಗಳನ್ನು ಮಾರಾಟ ಮಾಡಿದ್ದ ಟಾಟಾ ಮೋಟಾರ್, ಆಗ   ಸ್ಟ್‌ನಲ್ಲಿ ಶೇ 40ರಷ್ಟು ಇಳಿಕೆ ದಾಖಲಿಸಿದೆ.

ದ್ವಿಚಕ್ರ ವಾಹನ: ದ್ವಿಚಕ್ರ ವಾಹನಗಳ ಮಾರಾಟ ಶೇ 15ರಷ್ಟು ಹೆಚ್ಚಿದೆ. ಆಗಸ್ಟ್ ತಿಂಗಳಲ್ಲಿ 8,39,772 ವಾಹನಗಳು ಮಾರಾಟವಾಗಿದೆ. ಮಾರುಕಟ್ಟೆ ಮುಂಚೂಣಿ ಹೀರೊ ಮೋಟೊ ಕಾರ್ಫ್ ಶೇ 19ರಷ್ಟು ಪ್ರಗತಿ ದಾಖಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.