ADVERTISEMENT

ಬೆಲೆ ಕುಸಿತ:ಮೆಣಸಿನಕಾಯಿ ಸರದಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST
ಬೆಲೆ ಕುಸಿತ:ಮೆಣಸಿನಕಾಯಿ ಸರದಿ
ಬೆಲೆ ಕುಸಿತ:ಮೆಣಸಿನಕಾಯಿ ಸರದಿ   

ಬಳ್ಳಾರಿ: ಕಳೆದ ವರ್ಷ ಮೆಣಸಿನಕಾಯಿ ಬೆಳೆದು ಭರ್ಜರಿ ಇಳುವರಿ ಹಾಗೂ ಬಂಪರ್ ಬೆಲೆ ಪಡೆದಿದ್ದ ಜಿಲ್ಲೆಯ ರೈತರು, ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ನಡುವೆಯೂ ತೆಗೆದ ಬೆಳೆಗೆ ಸೂಕ್ತ ಬೆಲೆ ದೊರೆಯದೆ ಪರದಾಡುತ್ತಿದ್ದಾರೆ.

ಪ್ರಮುಖವಾಗಿ ಗುಂಟೂರು ಹಾಗೂ ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಯುವ ಬಳ್ಳಾರಿ ತಾಲ್ಲೂಕಿನ ಕಗ್ಗಲ್ಲು, ದಮ್ಮೂರು, ಕೋಳೂರು, ಮದಿರೆ, ಸೋಮಸಮುದ್ರ, ಕೊರ್ಲಗುಂದಿ, ಶ್ರೀಧರಗಡ್ಡೆ, ಬೈಲೂರು, ಸಿಂಧಿಗೇರಿ, ಹಂದ್ಯಾಳು, ಕುರುಗೋಡು ಮತ್ತಿತರ ಗ್ರಾಮಗಳ ರೈತರು ಇದೀಗ ಮೆಣಸಿನಕಾಯಿ ಕೊಯ್ಲಿನಲ್ಲಿ ತೊಡಗಿದ್ದು, ಸೂಕ್ತ ಬೆಲೆ ದೊರೆಯದ್ದರಿಂದ ಕಂಗಾಲಾಗಿದ್ದಾರೆ.

ಕೀಟನಾಶಕ, ರಸಗೊಬ್ಬರ, ಬೀಜ, ಕೂಲಿ, ಸರಕು ಸಾಗಣೆ ವೆಚ್ಚ ಎಂದೆಲ್ಲ ಪ್ರತಿ ಎಕರೆಗೆ ರೂ 30ರಿಂದ ರೂ 40 ಸಾವಿರ ಖರ್ಚು ಮಾಡುವ ರೈತರು ಸಾಮಾನ್ಯವಾಗಿ ಎಕರೆಗೆ 12ರಿಂದ 15 ಕ್ವಿಂಟಲ್ ಇಳುವರಿ ಪಡೆಯುತ್ತಾರೆ.

ಆದರೆ, ಪ್ರಸಕ್ತ ವರ್ಷ ಮಳೆಯ ಅಭಾವದಿಂದಾಗಿ ಇಳುವರಿ ಕುಸಿದಿದ್ದು, ಎಕರೆಗೆ 8ರಿಂದ 10 ಕ್ವಿಂಟಲ್ ಮಾತ್ರ ದೊರೆತಿದೆ. ಕಳೆದ ವರ್ಷ ಪ್ರತಿ ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿಗೆ ರೂ 9,000 ದಿಂದ್ಙ11,000 ಹಾಗೂ ಗುಂಟೂರು ಮೆಣಸಿನಕಾಯಿಗೆ ರೂ 5,000 ದಿಂದ ರೂ 7,000 ದರ ಪಡೆದಿದ್ದ ರೈತರು ಈ ವರ್ಷ ಬ್ಯಾಡಗಿ ಕಾಯಿಗೆ ರೂ 4,000 ದಿಂದ ರೂ 9,000, ಗುಂಟೂರು ಕಾಯಿಗೆ ರೂ 2,000 ದಿಂದ ರೂ 4,000 ದರ ದೊರೆಯುತ್ತಿರುವುದರಿಂದ ಕುಪಿತರಾಗಿದ್ದಾರೆ.ಗರಿಷ್ಠ ದರವು ನೂರಕ್ಕೆ ಒಬ್ಬ ರೈತರಿಗೆ ದೊರೆಯುತ್ತದೆ. ಬಹುತೇಕ ರೈತರಿಗೆ ಕನಿಷ್ಠ ದರವೇ ದೊರೆಯುತ್ತಿದ್ದು, ಕೃಷಿ ಅವಲಂಬಿಸಿದವರಿಗೆ ತೀವ್ರ ಸಂಕಷ್ಟ ಎದುರಾಗಿದೆ ಎಂದು ಕಗ್ಗಲ್ಲು ಗ್ರಾಮದ ರೈತ ಕೆ.ಎಂ. ಸದಾನಂದ  `ಪ್ರಜಾವಾಣಿ~ ಎದುರು ನೋವು ತೋಡಿಕೊಂಡರು.

ನೀರಾವರಿ ಸೌಲಭ್ಯವಿದ್ದರೂ ಮಳೆಯಿಲ್ಲದ್ದರಿಂದ ಇಳುವರಿ ಕಡಿಮೆಯಾಗಿದೆ. ಅಲ್ಲದೆ, ಕಾಯಿಯೂ ಸರಿಯಾಗಿರದೆ ಬಿಳಿ ಬಣ್ಣದ ಕಾಯಿಯೇ ಅಧಿಕವಾಗಿವೆ. ಅವುಗಳನ್ನೆಲ್ಲ ಬೇರ್ಪಡಿಸಿ, ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ. ಆದರೂ ಉತ್ತಮ ದರ ದೊರೆಯದಾಗಿದೆ ಎಂದು ಶ್ರೀನಿವಾಸ ಕ್ಯಾಂಪ್‌ನ ರೈತ ಶ್ರೀನಿವಾಸ ಎಂಬುವವರು ಹೇಳುತ್ತಾರೆ.ಈ ಭಾಗದಲ್ಲಿ ಕೆಲವರು ಜಮೀನ್ದಾರರಿಂದ ಎಕರೆಗೆ 12,000 ದಿಂದ 15,000ದವರೆಗೆ ನೀಡಿ ವರ್ಷದ ಅವಧಿಗೆ ಜಮೀನು ಗುತ್ತಿಗೆ ಪಡೆದು, ಹತ್ತಾರು ಸಾವಿರ ಖರ್ಚು ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಪ್ರತಿ ವರ್ಷ ಕಡೆಪಕ್ಷ ಜೀವನ ನಿರ್ವಹಣೆಗೆ ಆಗುವಷ್ಟು ಹಣ ಕಂಡವರು ಈ ವರ್ಷ ನಷ್ಟ ಅನುಭವಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.