ADVERTISEMENT

ಬ್ಯಾಂಕ್ ಆಫ್ ಬರೋಡ: ವಹಿವಾಟು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದಿಂದ ರೂ. 775 ಕೋಟಿ ಬಂಡವಾಳ ನೆರವು ಪಡೆಯಲಿದ್ದೇವೆ ಎಂದು ಬ್ಯಾಂಕ್ ಆಫ್ ಬರೋಡ ಅಧ್ಯಕ್ಷ ಎಂ.ಡಿ ಮಲ್ಯ ಹೇಳಿದರು.

ಸೋಮವಾರ ಇಲ್ಲಿ, ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾದ ವಲಯ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿರುವ ಬ್ಯಾಂಕಿನ ಶಾಖೆಗಳ ಸಂಖ್ಯೆಯನ್ನು 71ರಿಂದ 100ಕ್ಕೆ ಹೆಚ್ಚಿಸಲಾಗುವುದು ಎಂದರು.

ತಂತ್ರಜ್ಞಾನದ ನೆರವಿನಿಂದ ಗ್ರಾಹಕ ಸೇವೆಗಳಲ್ಲಿ ಸುಧಾರಣೆ ತರಲು  ರಾಜ್ಯದಲ್ಲಿರುವ 53 ಶಾಖೆಗಳನ್ನು `ಬರೋಡ ನೆಕ್ಸ್ಟ್~ ಶಾಖೆಗಳು ಎಂದು ಗುರುತಿಸಲಾಗಿದೆ. ಇವುಗಳ ಮೂಲಕ ಗ್ರಾಹಕರು ತ್ವರಿತ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು. ಸಾಲ ನೀಡಿಕೆ ಮತ್ತು ಗ್ರಾಹಕರ ದತ್ತಾಂಶ ನಿರ್ವಹಣೆಗಾಗಿ ಈಗಾಗಲೇ ಕೇಂದ್ರೀಕೃತ ಆನ್‌ಲೈನ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದರು.

ಆರ್ಥಿಕ ಅಸ್ಥಿರತೆಯಿಂದ ಹೊಸ ಹೂಡಿಕೆ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದ್ದು, ಕಾರ್ಪೊರೇಟ್ ಸಾಲದ ಬೇಡಿಕೆ ತಗ್ಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಬ್ಯಾಂಕಿನ ಒಟ್ಟಾರೆ ಸಾಲದ ಬೇಡಿಕೆಯು ಶೇ 19ರಿಂದ ಶೇ 20ರಷ್ಟು ಹೆಚ್ಚಾಗಿದೆ ಎಂದರು. ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎಸ್ ಶ್ರೀನಾಥ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.