ADVERTISEMENT

ಭಾರತದ ‘ಬ್ಲ್ಯಾಕ್‌ ಟೀ’ಗೆ ಮನಸೋತ ಚೀನಾ!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಬೀಜಿಂಗ್‌(ಪಿಟಿಐ): ಭಾರತದ ‘ಬ್ಲ್ಯಾಕ್‌ ಟೀ’ಗೆ ಚೀನಾದಲ್ಲಿ ಈಗ ಭಾರಿ ಬೇಡಿಕೆ. ಅದರಲ್ಲೂ ಡಾರ್ಜಲಿಂಗ್‌ ಮತ್ತು ನೀಲಗಿರಿ ಭಾಗದಿಂದ ಬಂದ ಬ್ಲ್ಯಾಕ್‌ ಟೀ ಕುಡಿಯುವುದು ಚೀನಾದ ಯುವ ಜನರ  ಪಾಲಿಗೆ ಫ್ಯಾಷನ್‌ ಆಗಿಬಿಟ್ಟಿದೆ!

‘ಗ್ರೀನ್‌ ಟೀ’ಗೆ ಹೆಸರುವಾಸಿ­ಯಾಗಿದ್ದ ಚೀನಾಕ್ಕೆ ‘ಬ್ಲ್ಯಾಕ್ ಟೀ’ ರುಚಿ­ಯನ್ನು ಭಾರತ ಪರಿಚಯಿಸಿದೆ. ಅದಕ್ಕೀಗ ಅಲ್ಲಿ ಭಾರಿ ಬೇಡಿಕೆಯೂ ವ್ಯಕ್ತವಾಗುತ್ತಿದೆ. ಹೀಗಾಗಿ 2015ರ ವೇಳೆಗೆ ಭಾರತದಿಂದ ಚೀನಾಕ್ಕೆ 10 ಕೋಟಿ ಕೆ.ಜಿ ಚಹಾಪುಡಿ ರಫ್ತಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ಇತ್ತೀಚೆಗೆ ಭಾರತದ ರಾಯಭಾರಿ ಕಚೇರಿ ಬೀಜಿಂಗ್‌ನಲ್ಲಿ ಏರ್ಪಡಿಸಿದ್ದ ‘ಭಾರತೀಯ ಚಹಾ ರುಚಿ ಮತ್ತು  ಮಾರುಕಟ್ಟೆ ಉತ್ತೇಜನ’ ವಿಚಾರ ಸಂಕಿರಣದಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ಒಂದು ಕಾಲದಲ್ಲಿ ಚಹಾ ಉತ್ಪಾದನೆಯಲ್ಲಿ ಏಕಸ್ವಾಮ್ಯ ಮೆರೆದಿದ್ದ ಚೀನಾಕ್ಕೆ, ಈಗ ಭಾರತ ಮತ್ತೊಮ್ಮೆ  ಚಹಾ ರುಚಿ ತೋರಿ­ಸಿಕೊಟ್ಟಿದೆ. 

ಚೀನಾದ ನಗರ ಪ್ರದೇಶದ ಯುವ ಜನರು ಭಾರತದ ಬ್ಲ್ಯಾಕ್‌ ಟೀಗೆ ಮನಸೋತಿದ್ದಾರೆ. ವಿವಿಧ ರುಚಿಯ ‘ಕುಡಿಯಲು ಸಿದ್ಧ ರೂಪದಲ್ಲಿ’ರುವ (ರೆಡಿ ಟು ಡ್ರಿಂಕ್‌) ಚಹಾ ಪುಡಿಗೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.  ಬ್ಲ್ಯಾಕ್‌ ಟೀ ಉತ್ಪಾದನೆಯಲ್ಲಿ ಪ್ರಪಂಚ­ದಲ್ಲಿ ಮುಂಚೂ­ಣಿಯಲ್ಲಿರುವ ಭಾರತ, ಚೀನಾ ಮಾರುಕಟ್ಟೆಯಿಂದ ಎಷ್ಟೇ ಬೇಡಿಕೆ ಬಂದರೂ ಪೂರೈಸುವಷ್ಟು ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ  ರಾಯ­ಭಾರಿ ಅಧಿಕಾರಿ ಬಾಲ ಭಾಸ್ಕರ್‌.

2010ರಲ್ಲಿ ಭಾರತದಲ್ಲಿ 96.64 ಕೋಟಿ ಕೆ.ಜಿಗಳಷ್ಟು ಚಹಾ ಉತ್ಪಾದನೆ ಆಗಿತ್ತು. ಇದರಲ್ಲಿ ಶೇ 80ರಷ್ಟು ಬ್ಲ್ಯಾಕ್‌ ಟೀ ಎಂದು ಅವರು ಮಾಹಿತಿ  ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.