ADVERTISEMENT

ಮಾತೃಭಾಷೆಗೆ ದ್ರೋಹ ಬೇಡ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಬ್ಯಾಂಕಾಕ್:`ಅತಿಥಿಗಳನ್ನು ಗೌರವದಿಂದ ಕಾಣಬೇಕೇ ಹೊರತು ಅವರಿಗೆ ಮನೆಯ ಯಜಮಾನಿಕೆ ಕೊಡಬಾರದು. ಹಾಗೆಯೇ ಪರಭಾಷೆಯನ್ನು ಸೌಹಾರ್ದದಿಂದ ಕಾಣೋಣ, ಅದು ಆಡುಭಾಷೆಯಾದರೆ ನಮ್ಮ ನಾಡುನುಡಿಗೆ, ಮಾತೃಭಾಷೆಗೆ ದ್ರೋಹ ಮಾಡಿದಂತೆ ಆಗುತ್ತದೆ~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಅವರು ಬ್ಯಾಂಕಾಕ್‌ನಲ್ಲಿ ನಡೆದ 5ನೇ ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಉದ್ಘಾಟಿಸಿ ಕನ್ನಡಿಗರಿಗೆ ಕರೆ ನೀಡಿದರು.

`ಮಾತೃಭಾಷೆಯಲ್ಲಿ ವಿಷಯ ತಿಳಿಸಿದರೆ  ಜನರು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲರು. ಕನ್ನಡವನ್ನು ಎಲ್ಲ ಕಡೆಗಳಲ್ಲಿ ಬಳಸಬೇಕು~ ಎಂದು ಅವರು ಕರೆ ನೀಡಿದರು.  ಇಲ್ಲಿನ `ಥಾಯ್ ಕನ್ನಡ ಬಳಗ~ ಮತ್ತು ಮಂಗಳೂರಿನ `ಹೃದಯವಾಹಿನಿ ಬಳಗ~ ಜಂಟಿಯಾಗಿ ಏರ್ಪಡಿಸಿದ ಸಮಾರಂಭದ ಅಧ್ಯಕ್ಷತೆಯನ್ನು ವಿನ್ಸೆಂಟ್ ಪಿಂಟೋ ಅವರು ವಹಿಸಿದ್ದರು.

ಥಾಯ್ಲೆಂಡ್‌ನಲ್ಲಿ ಕನ್ನಡಿಗರ ಮಕ್ಕಳಿಗೆ ಕಲಿಕಾ ಕೇಂದ್ರ ಆರಂಭಿಸಲು ಸಹಕಾರ ನೀಡುವಂತೆ `ಮುಖ್ಯಮಂತ್ರಿ~ ಚಂದ್ರು ಅವರನ್ನು ಕೋರಿದರು. ಕುವೈತ್ ತುಳುಕೂಟದ  ಮಾಜಿ ಅಧ್ಯಕ್ಷ ಇಲಿಯಾಸ್ ಸ್ಯಾಂಕ್ಟಿಸ್ ಅವರು ಮಾತನಾಡಿದರು. ಮುಖ್ಯ ಅತಿಥಿ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಮಂಜುನಾಥ್ ಸಾಗರ್ ` ಹೃದಯವಾಹಿನಿ ಬಳಗ ವಿಶ್ವದ ಎ್ಲ್ಲಲೆಡೆ ಇರುವ ಕನ್ನಡಿಗರು ಕರ್ನಾಟಕದ ಜತೆಗೆ ಇರುವ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಎಲ್ಲ ರೀತಿಯಿಂದ ಶ್ರಮಿಸುತ್ತದೆ~ ಎಂದು ಹೇಳಿದರು.

ಅನಿವಾಸಿ ಕನ್ನಡಿಗರ ಮಕ್ಕಳಿಗೆ ಕಲೆ ಮತ್ತು ಸಾಹಿತ್ಯದ ಪರಿಚಯವನ್ನು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಮೂಲಕ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು. ಕವಿಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಹಿದಾಸ್ ನಾಯಕ್ ವಹಿಸ್ದ್ದಿದರು.

ಹಿರಿಯ ಪತ್ರಕರ್ತ ಇ.ವಿ. ಸತ್ಯನಾರಾಯಣ ಅವರು ಸಂವಾದದ ಅಂಗವಾಗಿ ಮಾತನಾಡಿ ವಿದೇಶದಲ್ಲಿರುವ  ಕನ್ನಡ ಸಂಘಗಳ ಸಹಯೋಗದೊಂದಿಗೆ ನಡೆಯುವ ಕನ್ನಡ ಕಾರ್ಯಕ್ರಮಗಳು ಪ್ರತಿಯೊಬ್ಬ ಕನ್ನಡಿಗನೂ ಜಾಗೃತಗೊಳ್ಳುವಂತೆ ಮೂಡಿ ಬರುತ್ತಿರುವುದು ಸಂತೋಷಕರ ಎಂದರು.

ಕವಿಗೋಷ್ಠಿಯಲ್ಲಿ ಬಿಂಡಿಗನವಿಲೆ ಭಗವಾನ್ ಮತ್ತು ಉಷಾ ಲತಾ ಅವರು ಕವನ ವಾಚಿಸಿದರು. ಕಿಕ್ಕೇರಿ ಕೃಷ್ಣಮೂರ್ತಿ, ಉಷಾ ಸುನಿಲ್ ಉಷಾ ಲತಾ ಕನ್ನಡ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.