ADVERTISEMENT

ಮಾರ್ಚ್‌ 31ರ ಒಳಗೆ ಐ.ಟಿ ರಿಟರ್ನ್ಸ್‌ ಸಲ್ಲಿಸಲು ಮನವಿ

ಪಿಟಿಐ
Published 23 ಮಾರ್ಚ್ 2018, 19:30 IST
Last Updated 23 ಮಾರ್ಚ್ 2018, 19:30 IST

ನವದೆಹಲಿ: ನೋಟು ರದ್ದತಿ ಬಳಿಕ ಬ್ಯಾಂಕ್‌ ಖಾತೆಗಳಲ್ಲಿ  ಭಾರಿ ಪ್ರಮಾಣದಲ್ಲಿ ಠೇವಣಿ ಇಟ್ಟಿರುವ ಬಗ್ಗೆ ಯಾವುದೇ ಬಗೆಯಲ್ಲಿ ಆತಂಕ ಪಡದೇ ಮಾರ್ಚ್ 31ರ ಒಳಗೆ ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್‌) ಸಲ್ಲಿಸಿ ಎಂದು ಆದಾಯ ತೆರಿಗೆ ಇಲಾಖೆಯು ಸಲಹೆ ನೀಡಿದೆ.

‘ನಾವು ನಿಮ್ಮನ್ನು ನಂಬುತ್ತೇವೆ. ಹೀಗಿರುವಾಗ ಭಯವೇಕೆ. ನಿಮ್ಮ ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿಯನ್ನು ಯಾವುದೇ ಅಳುಕಿಲ್ಲದೆ ಸಲ್ಲಿಸಿ’ ಎಂದು  ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ತೆರಿಗೆ ಪಾವತಿದಾರರಿಗೆ  ಜಾಹೀರಾತಿನ ಮೂಲಕ ಮನವಿ ಮಾಡಿಕೊಂಡಿದೆ.

ಸಲ್ಲಿಕೆಯಾಗುವ ಐಟಿಆರ್‌ ಗಳಲ್ಲಿ ಶೇ 1ಕ್ಕಿಂತಲೂ ಕಡಿಮೆ ಐಟಿಆರ್‌ಗಳನ್ನು ಪರಿಶೀಲನೆ ಅಥವಾ ತನಿಖೆಗೆ ಆಯ್ಕೆ ಮಾಡಲಾಗುತ್ತದೆ. ವ್ಯಕ್ತಿಗಳ ಹಸ್ತಕ್ಷೇಪ ಇಲ್ಲದೇ, ಸಂಪೂರ್ಣವಾಗಿ ಕಂಪ್ಯೂಟರ್‌ ವ್ಯವಸ್ಥೆಯ ಮೂಲಕ ಈ ಪ್ರಕ್ರಿಯೆ ನಡೆಯುತ್ತದೆ. 2016–17 ಮತ್ತು 2017–18ನೇ ವರ್ಷಕ್ಕೆ ಐಟಿಆರ್‌ ಸಲ್ಲಿಸಲು ಇದು ಕೊನೆಯ ಅವಕಾಶವಾಗಿದೆ ಎಂದು ಜಾಹೀರಾತಿನಲ್ಲಿ ತಿಳಿಸಲಾದೆ.

ADVERTISEMENT

ಭಾರಿ ಮೊತ್ತವನ್ನು ಬ್ಯಾಂಕ್‌ ಠೇವಣಿಗಳಲ್ಲಿ ಇರಿಸಿದ್ದರೆ ಅಥವಾ ಗರಿಷ್ಠ ಮೊತ್ತದ ವಹಿವಾಟು ನಡೆಸಿದ್ದರೆ ರಿಟರ್ನ್ಸ್‌ ಸಲ್ಲಿಸುವಾಗ ಅದನ್ನು ನಮೂದಿಸಿ. ರಿಟರ್ನ್ಸ್‌ ಸಲ್ಲಿಸದೇ ಇರುವುದು ಅಥವಾ ತಪ್ಪಾಗಿ ರಿಟರ್ನ್ಸ್‌ ಸಲ್ಲಿಸುವುದರಿಂದ ದಂಡ ಕಟ್ಟುವ ಮತ್ತು ಕಾನೂನು ಕ್ರಮ ಎದುರಿಸುವ ಸಂದರ್ಭ ಎದುರಾಗಬಹುದು ಎಂದೂ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.