ಮುಂಬೈ (ಪಿಟಿಐ): ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಮಂಗಳವಾರ 3:45ರಿಂದ 5ಗಂಟೆ ವರೆಗೆ ನಡೆದ 75 ನಿಮಿಷಗಳ `ವಿಶೇಷ ದೀಪಾವಳಿ ಮುಹೂರ್ತ~ ವಹಿವಾಟಿನಲ್ಲಿ ಸೂಚ್ಯಂಕ 52 ಅಂಶಗಳಷ್ಟು ಕುಸಿತ ಕಂಡು 18,618 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.
2007ರ ನಂತರ ಇದೇ ಮೊದಲ ಬಾರಿಗೆ ದೀಪಾವಳಿ ಮುಹೂರ್ತ ವಹಿವಾಟಿನಲ್ಲಿ ಸೂಚ್ಯಂಕ ಕುಸಿತ ಕಂಡಿದೆ. 2007ರಲ್ಲಿ ಮುಹೂರ್ತ ವಹಿವಾಟಿನಲ್ಲಿ `ಬಿಎಸ್‌ಇ~ ಸೂಚ್ಯಂಕ 150 ಅಂಶಗಳಷ್ಟು ಮತ್ತು `ನಿಫ್ಟಿ~ 36 ಅಂಶಗಳಷ್ಟು ಕುಸಿತ ಕಂಡಿತ್ತು.
ಮಂಗಳವಾರ ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕ 60 ಅಂಶಗಳಷ್ಟು ಏರಿಕೆ ಪಡೆದು 18,732 ಅಂಶಗಳನ್ನು ತಲುಪಿತ್ತು. ಆದರೆ, ಹೂಡಿಕೆದಾರರು ಲಾಭ ಗಳಿಕೆಗಾಗಿ ದಿಢೀರ್ ಮಾರಾಟಕ್ಕೆ ಮುಂದಾಗಿದ್ದರಿಂದ ಒತ್ತಡ ಹೆಚ್ಚಾಗಿ ಸೂಚ್ಯಂಕ ಒಂದು ವಾರದ ಹಿಂದಿನ ಮಟ್ಟಕ್ಕೆ ಇಳಿಯಿತು.
ಪ್ರಮುಖ 30 ಕಂಪೆನಿಗಳ ಷೇರುಗಳಲ್ಲಿ ಭಾರ್ತಿ ಏರ್‌ಟೆಲ್, ಆರ್‌ಐಎಲ್, ಒಎನ್‌ಜಿಸಿ ಸೇರಿದಂತೆ 13 ಕಂಪೆನಿಗಳ ಷೇರುಗಳು ಲಾಭ ಮಾಡಿಕೊಂಡವು. ಟಾಟಾ ಮೋಟಾರ್ಸ್, ಎಚ್‌ಡಿಎಫ್‌ಸಿ, ಇನ್ಫೋಸಿಸ್ ಮತ್ತು `ಎಸ್‌ಬಿಐ~ ಕುಸಿತ ಕಂಡವು. ಕೈಗಾರಿಕಾ ಪ್ರಗತಿ ಕುಸಿತ ಮತ್ತು ಹಣದುಬ್ಬರ ಭೀತಿ ಕೂಡ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದವು. ಜಾಗತಿಕ ಸಾಲ ಮೌಲ್ಯ ಮಾಪನ ಸಂಸ್ಥೆಗಳು ಭಾರತದ ಕ್ರೆಡಿಟ್ ರೇಟಿಂಗ್ ತಗ್ಗಿಸುವ ಎಚ್ಚರಿಕೆ ನೀಡಿರುವುದು ಕೂಡ ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಹರಿವಿನ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 17 ಅಂಶಗಳಷ್ಟು ಕುಸಿತ ಕಂಡು 5,667 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಐ.ಟಿ, ರಿಯಾಲ್ಟಿ ಷೇರುಗಳು ಲಾಭ ಮಾಡಿಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.