ADVERTISEMENT

`ಮೊದಲ ವರ್ಷ ರೂ 350 ಕೋಟಿ ವಹಿವಾಟು ಗುರಿ'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ಬೆಂಗಳೂರು: ನಾಲ್ಕು ದಶಕಗಳಿಂದ ಬೃಹತ್ ಯಂತ್ರಗಳ ತಯಾರಿಕೆ, ಅಳವಡಿಕೆ ಉದ್ಯಮದಲ್ಲಿರುವ ನಗರದ `ಪ್ರೊಮ್ಯಾಕ್ ಎಂಜಿನಿಯರಿಂಗ್ ಇಂಡಸ್ಟ್ರೀಸ್ ಲಿ.'(ಪಿಇಐಎಲ್) ಮತ್ತು ಜಪಾನ್‌ನ ಸಿಮೆಂಟ್ ಯಂತ್ರಗಳ ಪ್ರಮುಖ ಕಂಪೆನಿ `ತೈಹೈಯೊ ಎಂಜಿನಿಯರಿಂಗ್ ಕಾರ್ಪೊರೇಷನ್'(ಟಿಇಸಿ) ಜಂಟಿ ಸಹಭಾಗಿತ್ವದಲ್ಲಿ `ತೈಹೈಯೊ ಪ್ರೊಮ್ಯಾಕ್ ಎಂಜಿನಿಯರಿಂಗ್ ಪ್ರೈ.ಲಿ.' ಎಂಬ ನೂತನ ಕಂಪೆನಿ ಹುಟ್ಟುಹಾಕಿವೆ.

ನೂತನ ಕಂಪೆನಿ ಆರಂಭದ ಒಪ್ಪಂದಪತ್ರಕ್ಕೆ `ಪಿಇಐಎಲ್' ಅಧ್ಯಕ್ಷ ಜೆ.ಸುರೇಂದ್ರ ರೆಡ್ಡಿ ಮತ್ತು `ಟಿಇಸಿ' ಅಧ್ಯಕ್ಷ ಹರೊವ್ ಸುಯುಕಿ ನಗರದಲ್ಲಿ  ಸಹಿ ಹಾಕಿದರು.

ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಂದ್ರ ರೆಡ್ಡಿ, ನೂತನ  ಕಂಪೆನಿ ಭಾರತ ಸೇರಿದಂತೆ ಏಷ್ಯಾ ಖಂಡದ ದೇಶಗಳಲ್ಲಿ ಹಾಗೂ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿನ ಸಿಮೆಂಟ್ ಕಂಪೆನಿಗಳಿಗೆ ಯಂತ್ರೋಪಕರಣ ಜೋಡಣೆ, ಘಟಕ ನಿರ್ಮಾಣ ಕಾಮಗಾರಿ ಸೇರಿದಂತೆ ಒಟ್ಟಾರೆ ಯೋಜನೆ ಜಾರಿಗೆ ನೆರವಾಗಲಿದೆ. ಮುಂದಿನ ಆರು ತಿಂಗಳಲ್ಲಿ ಹೊಸ ಯೋಜನೆಯೊಂದನ್ನು ನೂತನ ಕಂಪೆನಿ ಕೈಗೆತ್ತಿಕೊಳ್ಳಲಿದೆ ಎಂದರು.

ಜಂಟಿ ಸಹಭಾಗಿತ್ವದಲ್ಲಿ ಪ್ರೊಮ್ಯಾಕ್‌ನ ತ್ರಾಂತಿಕತೆ ನೆರವು ಮತ್ತು `ಟಿಇಸಿ'ಯ ಮಾರುಕಟ್ಟೆ ಅನುಭವ ಮುಖ್ಯ ಪಾತ್ರ ವಹಿಸಲಿವೆ. `ತೈಹೈಯೊ ಪ್ರೊಮ್ಯಾಕ್ ಎಂಜಿನಿಯರಿಂಗ್ ಪ್ರೈ.ಲಿ.' ಮೊದಲ ವರ್ಷ ರೂ. 350 ಕೋಟಿ ವಹಿವಾಟು ನಡೆಸುವ ವಿಶ್ವಾಸವಿದೆ ಎಂದು ರೆಡ್ಡಿ ವಿವರಿಸಿದರು.

ಷೇರುಪೇಟೆ ನೋಂದಾಯಿತ ಕಂಪೆನಿಯಾದ `ಪ್ರೊಮ್ಯಾಕ್'ನ ಶೇ 70ರಷ್ಟು ಚಟುವಟಿಕೆ ಹೊರದೇಶಗಳಲ್ಲಿಯೇ ಇದೆ. 1970-80ರಲ್ಲಿ ಎಂಟು ಯೋಜನೆ ಜಾರಿಗೊಳಿಸಿದ್ದ ಕಂಪೆನಿ, ಸಾಮರ್ಥ್ಯ ಹೆಚ್ಚಿಸಿಕೊಂಡು 2001-12ರ ವೇಳೆ 25 ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಕಂಪೆನಿಯ ನಿರ್ದೇಶಕ ಜಯರಾಮ್ ಎಸ್.ರೆಡ್ಡಿ ಹೇಳಿದರು.25 ವರ್ಷಗಳ ಹಿಂದೆಯೇ `ಪ್ರೊಮ್ಯಾಕ್' ಜತೆ ಮೈತ್ರಿ ಏರ್ಪಟ್ಟಿದೆ. ಈಗ ಜಂಟಿ ಸಹಭಾಗಿತ್ವದಲ್ಲಿ ಹೊಸ ಕಂಪೆನಿ ಹುಟ್ಟುಹಾಕಲು ಸಂತಸವೆನಿಸುತ್ತಿದೆ ಎಂದು `ಟಿಇಸಿ' ಅಧ್ಯಕ್ಷ ಹರೊವ್ ಸುಯುಕಿ ಹೇಳಿದರು. `ಟಿಇಸಿ'ಯ ಭಾರತದಲ್ಲಿನ ಅಧಿಕಾರಿ ಅಲಗಲಾ ಡಿ. ಭಾಸ್ಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT