ADVERTISEMENT

ರಾಗಿಮುದ್ದೆ ತಯಾರಿಕೆ ಯಂತ್ರ ಸಿದ್ಧ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 16:13 IST
Last Updated 14 ಜುಲೈ 2017, 16:13 IST
ಮೈಸೂರಿನ ಸಿಎಫ್‌ಟಿಆರ್ಐನಲ್ಲಿ ಅಭಿವೃದ್ಧಿಪಡಿಸಿರುವ ರಾಗಿ ಮುದ್ದೆ ತಯಾರಿಸುವ ಯಂತ್ರವನ್ನು ನಿರ್ವಹಿಸುತ್ತಿರುವ ಸಿಬ್ಬಂದಿ
ಮೈಸೂರಿನ ಸಿಎಫ್‌ಟಿಆರ್ಐನಲ್ಲಿ ಅಭಿವೃದ್ಧಿಪಡಿಸಿರುವ ರಾಗಿ ಮುದ್ದೆ ತಯಾರಿಸುವ ಯಂತ್ರವನ್ನು ನಿರ್ವಹಿಸುತ್ತಿರುವ ಸಿಬ್ಬಂದಿ   

ಮೈಸೂರು: ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ವಿನ್ಯಾಸ ಹಾಗೂ ಫ್ಯಾಬ್ರಿಕೇಷನ್‌ ವಿಭಾಗವು ತಯಾರಿಸಿರುವ ದೇಶದ ಪ್ರಥಮ ರಾಗಿ ಮುದ್ದೆ ತಯಾರಿಸುವ ಯಂತ್ರವನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

ಯಂತ್ರಕ್ಕೆ ರಾಗಿ ಹಿಟ್ಟು, ನೀರು ಸೇರಿಸಿದರೆ ನೀರಿನ ಹಬೆಯ ಮೂಲಕ ಬೆಂದು ರಾಗಿ ಮುದ್ದೆ ಹೊರಬರುತ್ತದೆ. ಒಂದು ಗಂಟೆಗೆ ಈ ಯಂತ್ರ ಬರೋಬ್ಬರಿ 250 ಮುದ್ದೆ ತಯಾರಿಸುತ್ತದೆ. ಇದಕ್ಕೆ 25 ಕೆ.ಜಿ ರಾಗಿ ಹಿಟ್ಟು ಬೇಕಾಗುತ್ತದೆ.

ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಾಯೋಜಕತ್ವದಲ್ಲಿ  ಈ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಸಿಎಫ್‌ಟಿಆರ್‌ಐ ಹಿರಿಯ ಮುಖ್ಯ ವಿಜ್ಞಾನಿ ವಿ. ಡಿ. ನಾಗರಾಜ್‌  ನೇತೃತ್ವದಲ್ಲಿ ಈ ಸಾಧನ ತಯಾರಾಗಿದೆ.

ADVERTISEMENT

ರಾಗಿ ಮುದ್ದೆ ತಯಾರಿಸಲು 1 ಯೂನಿಟ್‌ ಒಳಗೆ ವಿದ್ಯುತ್‌ ಬಳಸಿಕೊಳ್ಳುತ್ತದೆ. ನೀರಿನ ಹಬೆಗಾಗಿ ಒಂದು ಗಂಟೆಗೆ 1.2 ಕೆ.ಜಿ ಅಡುಗೆ ಅನಿಲ ಖರ್ಚಾಗಲಿದೆ.

ಈ ಸಾಧನದ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಾಗರಾಜ್‌, ‘ರಾಜ್ಯದ ಹಲವು ಮಠಗಳು, ವಿದ್ಯಾರ್ಥಿನಿಲಯಗಳು ಹಾಗೂ ಕಾರಾಗೃಹಗಳಿಗೆ ಭೇಟಿ ನೀಡಿ, ಅವರ ಬೇಡಿಕೆಯ ಮೇಲೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಯಿತು. ಬೃಹತ್‌ ಪ್ರಮಾಣದಲ್ಲಿ ಮುದ್ದೆ ತಯಾರಿಸಲು ಈ ಯಂತ್ರದ ತಂತ್ರಜ್ಞಾನವನ್ನು ಸಂಸ್ಥೆಯಿಂದ ಪಡೆಯಬಹುದು. ಯಂತ್ರ ತಯಾರಿಗೆ ಗರಿಷ್ಠ ₹ 3 ಲಕ್ಷ ಖರ್ಚಾಗುವುದು’ ಎಂದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ  ಎಚ್‌.ಡಿ.ದೇವೇಗೌಡ ಈ ಸಾಧನಕ್ಕೆ ಚಾಲನೆ ನೀಡಿದರು. ಮೈಸೂರು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ, ಸಂಸ್ಥೆ ನಿರ್ದೇಶಕ ಡಾ.ರಾಮ್‌ ರಾಜಶೇಖರನ್‌ ಉಪಸ್ಥಿತರಿದ್ದರು.

* ನಮ್ಮ ಮನೆಯಲ್ಲಿ ತಯಾರಿಸುವ ಮುದ್ದೆಯ ಹಾಗೇ ಈ ಯಂತ್ರದಲ್ಲಿ ತಯಾರಾಗಿದೆ. ಹಳ್ಳಿ ಜನರ ರಾಗಿ ಮುದ್ದೆ ತಯಾರಿಗೆ ಸಿಎಫ್‌ಟಿಆರ್‌ಐ ಶ್ರಮಿಸಿರುವುದು ಶ್ಲಾಘನೀಯ

- ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ಯಂತ್ರದ ವಿವರ:

₹ 3 ಲಕ್ಷ

ಈ ಸಾಧನ ತಯಾರಿಗೆ ತಗುಲುವ ವೆಚ್ಚ

1ಯುನಿಟ್‌

ಒಂದು ಗಂಟೆಗೆ ವಿದ್ಯುತ್‌ ಬಳಕೆ

250

ಒಂದು ಗಂಟೆಯಲ್ಲಿ ತಯಾರಾಗುವ ರಾಗಿ ಮುದ್ದೆಗಳು

1.2 ಕೆ.ಜಿ

ಒಂದು ಗಂಟೆಗೆ ಬೇಕಾಗುವ ಅಡುಗೆ ಅನಿಲ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.