ADVERTISEMENT

ರೈತಮಿತ್ರ ‘ಭೀಮಾ ಸೂಪರ್’!

ಎನ್‌ಒಜಿಆರ್‌ಡಿಯಿಂದ ಹೊಸ ತಳಿ ಈರುಳ್ಳಿ ಬೀಜ

ವೆಂಕಟೇಶ್ ಜಿ.ಎಚ್
Published 6 ಜೂನ್ 2015, 19:30 IST
Last Updated 6 ಜೂನ್ 2015, 19:30 IST
ರೈತಮಿತ್ರ ‘ಭೀಮಾ ಸೂಪರ್’!
ರೈತಮಿತ್ರ ‘ಭೀಮಾ ಸೂಪರ್’!   

ಹುಬ್ಬಳ್ಳಿ: ಮುಂಗಾರು ಹಂಗಾಮಿನಲ್ಲಿ ಬೇರೆ ತಳಿಗಳಿಗಿಂತ ಶೇ 13ರಷ್ಟು ಹೆಚ್ಚು ಇಳುವರಿ ನೀಡುವ ‘ಭೀಮಾ ಸೂಪರ್’ ಹೆಸರಿನ ಈರುಳ್ಳಿ ಬೀಜವನ್ನು ಪುಣೆಯ ರಾಷ್ಟ್ರೀಯ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಶೋಧನಾ ನಿರ್ದೇಶನಾಲಯ (ಎನ್‌ಒಜಿಆರ್‌ಡಿ) ಅಭಿವೃದ್ಧಿಪಡಿಸಿದೆ.

ಇಲ್ಲಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸತತ ಐದು ವರ್ಷಗಳ ಸಂಶೋಧನೆಯ ಫಲಿತಾಂಶದ ನಂತರ ಭೀಮಾ ಸೂಪರ್‌ ತಳಿಯ ಬೀಜವನ್ನು ಬಿತ್ತನೆ ಮಾಡಲು ರೈತರಿಗೆ ನೀಡಲು ನಿರ್ದೇಶನಾಲಯ ಮುಂದಾಗಿದೆ.

  ಕೃಷಿ ವಿಶ್ವವಿದ್ಯಾಲಯದ ಈರುಳ್ಳಿ ಸಂಶೋಧನಾ ವಿಭಾಗದ ತಜ್ಞರು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್‌ನ ಹವಾಗುಣದಲ್ಲಿ ಭೀಮಾ ಸೂಪರ್‌ ತಳಿಯನ್ನು ಯಶಸ್ವಿಯಾಗಿ ಬೆಳೆಯಬಹುದು ಎಂದು ನಿರ್ದೇಶನಾ ಲಯಕ್ಕೆ ಶಿಫಾರಸು ಮಾಡಿದ್ದರು.    ಅದಕ್ಕೆ ನಿರ್ದೇಶನಾಲಯ ಹಸಿರು ನಿಶಾನೆ ನೀಡುತ್ತಿದ್ದಂತೆಯೇ ರೈತರ ಉಪ ಯೋಗಕ್ಕೆ ಬಿಡುಗಡೆ ಮಾಡಲು ಮುಂದಾದ ಕೃಷಿ ವಿಶ್ವವಿದ್ಯಾಲಯ, ಈ  ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು 1.5 ಟನ್‌  ಬೀಜವನ್ನು ರೈತರಿಗೆ ವಿತರಿಸಿದೆ.

‘ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಮಳೆ ಆಶ್ರಯಿಸಿ ಹಾಲಿ ಅರ್ಕಾ ಕಲ್ಯಾಣ, ನಾಸಿಕ್ ರೆಡ್, ಬಳ್ಳಾರಿ ರೆಡ್‌ ಹೆಸರಿನ ಈರುಳ್ಳಿ ಬೀಜದ ತಳಿಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಈ ತಳಿಗಳು ಇಳುವರಿ ಕಡಿಮೆ ನೀಡುತ್ತಿವೆ ಎಂದು ಬೆಳೆಗಾರರು ದೂರುತ್ತಿದ್ದ ಕಾರಣ ಭೀಮಾ ಸೂಪರ್ ಅಭಿವೃದ್ಧಿಪಡಿಸ ಲಾಗಿದೆ’ ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲ ಯದ ಈರುಳ್ಳಿ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಪಿ.ಆರ್. ಧರ್ಮಟ್ಟಿ.

   ‘ಧಾರವಾಡ ಸೇರಿದಂತೆ ದೇಶದ 12 ಕೇಂದ್ರಗಳಲ್ಲಿ ಹೊಸ ತಳಿಯ ಬೀಜವನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಇಲ್ಲಿಯ ಹವಾಗುಣದಲ್ಲಿ ಅದು ಚೆನ್ನಾಗಿ ಬೆಳೆದಿದೆ. ಅಕಸ್ಮಾತ್‌ ಮಳೆ ಹೆಚ್ಚಾದರೂ ಬೇರೆ ತಳಿಗಿಂತ ಹೆಚ್ಚು ತಾಳಿಕೊಳ್ಳುವ ಶಕ್ತಿ ಇದಕ್ಕಿದೆ. ಮುಂದಿನ ಮಳೆಗಾಲದ ವೇಳೆಗೆ ಇನ್ನೂ ಹೆಚ್ಚಿನ ಪ್ರಮಾಣ ದಲ್ಲಿ ಬೀಜೋತ್ಪಾದನೆ ಮಾಡಿ ರಾಜ್ಯದ ಎಲ್ಲಾ ಭಾಗದ ರೈತರಿಗೂ ಬೇಡಿಕೆಗೆ ಅನುಗು ಣವಾಗಿ ವಿತರಿಸ ಲಾಗುವುದು’ ಎಂದರು.

40 ಟನ್‌ವರೆಗೂ ಇಳುವರಿ: ‘ಉತ್ತರ ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ ಜಿಲ್ಲೆ, ದಕ್ಷಿಣ ಕರ್ನಾಟಕ ಭಾಗದಲ್ಲಿ ಚಿತ್ರದುರ್ಗ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಮಳೆ ಆಶ್ರಯಿಸಿ ಮುಂಗಾರು ಹಂಗಾಮಿ ನಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ.

   ಜೂನ್‌ ತಿಂಗಳಲ್ಲಿ ಬಿತ್ತನೆ ಮಾಡಿದಲ್ಲಿ ಹೆಕ್ಟೇರ್‌ಗೆ 28ರಿಂದ 30 ಟನ್ ಇಳುವರಿ ಕೊಡುವ ಭೀಮಾ ಸೂಪರ್, ಒಂದಷ್ಟು ತಡವಾಗಿ ಬಿತ್ತನೆ ಮಾಡಿದಲ್ಲಿ (ಆಗಸ್ಟ್‌  ತಿಂಗಳಲ್ಲಿ) ಹೆಕ್ಟೇರ್‌ಗೆ 40 ಟನ್‌ವರೆಗೂ ಇಳುವರಿ ನೀಡುತ್ತದೆ’ ಎಂದು ಧರ್ಮಟ್ಟಿ   ಹೇಳುತ್ತಾರೆ.

ಮುಖ್ಯಾಂಶಗಳು
* ಮಳೆಗಾಲದಲ್ಲಿ ಶೇ 13ರಷ್ಟು ಹೆಚ್ಚು ಇಳುವರಿ
* ಕೃಷಿ ವಿ.ವಿ ಆವರಣದಲ್ಲಿ ಪ್ರಾಯೋಗಿಕ ಯಶಸ್ಸು
* ಈಗಾಗಲೇ 1.5 ಟನ್ ಬೀಜ ರೈತರಿಗೆ ವಿತರಣೆ

ಈ ತಳಿಗೆ ಹೆಚ್ಚು ಮಳೆಯಾದರೂ ತಾಳಿಕೊಂಡು ಇಳುವರಿ ನೀಡುವ ಶಕ್ತಿ ಇದೆ. ಮುಂಗಾರು ಹಂಗಾಮಿನಲ್ಲಿ ಇದು ರೈತರಿಗೆ ಸಮೃದ್ಧಿಯ ಖಾತರಿ ನೀಡಲಿದೆ
ಪಿ.ಆರ್.ಧರ್ಮಟ್ಟಿ, ಕೃಷಿ ವಿ.ವಿ ಈರುಳ್ಳಿ ಸಂಶೋಧನಾ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT