ADVERTISEMENT

ರೋಗಬಾಧೆ: ಸಂಕಷ್ಟದಲ್ಲಿ ತೆಂಗು ಬೆಳೆಗಾರ

ಸಿ.ಕೆ.ಮಹೇಂದ್ರ
Published 22 ಮೇ 2012, 19:30 IST
Last Updated 22 ಮೇ 2012, 19:30 IST
ರೋಗಬಾಧೆ: ಸಂಕಷ್ಟದಲ್ಲಿ ತೆಂಗು ಬೆಳೆಗಾರ
ರೋಗಬಾಧೆ: ಸಂಕಷ್ಟದಲ್ಲಿ ತೆಂಗು ಬೆಳೆಗಾರ   

ತುಮಕೂರು: ಜಿಲ್ಲೆಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಗೆ ರೋಗ ಹಬ್ಬಿದ್ದು `ಕಲ್ಪತರು    ನಾಡಿನ~ ಬೆಳೆಗಾರರು ಬೀದಿಗೆ ಬಿದ್ದಿದ್ದಾರೆ. ರೋಗದ ಸಂಕಷ್ಟದಲ್ಲಿರುವಾಗಲೇ ತೆಂಗಿನಕಾಯಿ, ಕೊಬ್ಬರಿ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು ರೈತರು ಕಂಗಾಲಾಗಿದ್ದಾರೆ.

`ತುಮಕೂರು ಬರಗಾಲ ಪೀಡಿತ ಜಿಲ್ಲೆ~ ಎಂದು ಘೋಷಣೆಯಾಗಿದೆ. ಬರದ ಜತೆಗೆ ತೆಂಗಿನ ಬೆಳೆಗೆ ಕಾಂಡಕೊರಕ ಹುಳು, ರಸ ಸೋರುವಿಕೆ, ಕಪ್ಪು ಹುಳು ಬಾಧೆ, ನುಸಿಪೀಡೆ, ಅಣಬೆ ರೋಗ ಕಾಣಿಸಿಕೊಂಡಿದ್ದು, ಸಾವಿರಾರು ಹೆಕ್ಟೇರ್ ತೆಂಗು ಪ್ರದೇಶ ರೋಗಕ್ಕೆ ಬಲಿಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ನೂರಾರು ಎಕರೆ ತೆಂಗು ಬೆಳೆ ಒಣಗಿ ನಿಂತಿದೆ.

ಜಿಲ್ಲೆ ಸುತ್ತು ಹಾಕಿದರೆ ಪ್ರಕೃತಿಯ ಮುನಿಸು ಕಾಣುತ್ತದೆ. ತೆಂಗು ಬೆಳೆಯುವ ಪ್ರದೇಶದಲ್ಲಿ ರೋಗಬಾಧೆ, ಬೆಲೆ ಕುಸಿತಕ್ಕೆ ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದರೆ, ಮಳೆಯಾಶ್ರಿತ ಮಧುಗಿರಿ, ಪಾವಗಡ, ಶಿರಾ, ಕೊರಟಗೆರೆ ಜನರ ಸ್ಥಿತಿ ಬರದ ಬೇಗೆಯಿಂದ ಬಿಗಡಾಯಿಸಿದೆ.

ರೋಗದಿಂದ ತೆಂಗಿನ ಇಳುವರಿ ಕಡಿಮೆಯಾಗಿದೆ. ಜತೆಗೆ ಬೆಲೆ ಕುಸಿತ ದೊಡ್ಡ ಆಘಾತ ಉಂಟುಮಾಡಿದೆ. ಕಳೆದ ವರ್ಷ ಕ್ವಿಂಟಲ್ ಕೊಬ್ಬರಿ ಬೆಲೆ ರೂ. 8 ಸಾವಿರ ಇದ್ದದ್ದು ಈಗ ರೂ. 5200ರ ಆಸುಪಾಸಿಗೆ ಕುಸಿದಿದೆ. ಕ್ವಿಂಟಲ್ ತೆಂಗಿನ ಕಾಯಿಗೆ ರೂ. 10 ಸಾವಿರ ಇದ್ದ ಬೆಲೆ ಈಗ ರೂ. 6ರಿಂದ 7 ಸಾವಿರಕ್ಕೆ ಇಳಿದಿದೆ. ಬೆಲೆ ಕುಸಿತದ ಜತೆಗೆ ತೆಂಗಿನ ತೋಟಗಳು ರೋಗದಿಂದ ಒಣಗುತ್ತಿರುವುದು ರೈತರನ್ನು ಅವನತಿಯೆಡೆಗೆ ದೂಡುತ್ತಿದೆ.

`ರೋಗ ತಡೆಗೆ ಸಹಾಯಧನದಲ್ಲಿ ಔಷಧಿ ವಿತರಿಸಲಾಗುತ್ತಿದೆ. ಆದರೂ ರೋಗ ಹತೋಟಿಗೆ ಬರುತ್ತಿಲ್ಲ. ರೋಗದಿಂದ ತೋಟದ ಶೇ 70ರಷ್ಟು ಇಳುವರಿ ಕಡಿಮೆಯಾಗಿದೆ. ವಿಪರೀತ ರಾಸಾಯನಿಕ ಗೊಬ್ಬರ ಬಳಕೆ, ಅಂತರ್ಜಲ ಕುಸಿತದಿಂದ ಕಡಿಮೆ ನೀರು ಪೂರೈಕೆ ರೋಗ ಹೆಚ್ಚಲು ಕಾರಣ~ ಎಂದು ಜಿಲ್ಲಾ ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರಸಾದ್ `ಪ್ರಜಾವಾಣಿ~ಗೆ ತಿಳಿಸಿದರು.

`ರೋಗಕ್ಕಿಂತಲೂ ಬೆಲೆ ಕುಸಿದಿರುವುದು ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 17 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ತೆಂಗು, ಕೊಬ್ಬರಿ ಖರೀದಿಸದೇ ಇದ್ದರೆ ಮತ್ತಷ್ಟು ರೈತರು ಆತ್ಮಹತ್ಯೆಯತ್ತ ಸಾಗಲಿದ್ದಾರೆ~ ಎಂದು ಹಸಿರು ಸೇನೆ ಜಿಲ್ಲಾ ಸಂಚಾಲಕ ಕೆಂಕೆರೆ ಸತೀಸ್ ಆತಂಕ ವ್ಯಕ್ತಪಡಿಸಿದರು.

`ಬೆಳೆಗಾರರು ಸಣ್ಣಪುಟ್ಟ ಕೆಲಸ ಹುಡುಕಿಕೊಂಡು ಪಟ್ಟಣದತ್ತ ಹೋಗತೊಡಗಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಗಾರ್ಮೆಂಟ್‌ಗಳತ್ತ ಹೆಜ್ಜೆ ಹಾಕಿದ್ದಾರೆ. ರೈತರ ಬದುಕು ನೋಡಿದರೆ ಕಣ್ಣಲ್ಲಿ ನೀರಾಡುತ್ತದೆ~ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ಕೆ.ಎಸ್.ಸದಾಶಿವಯ್ಯ ಪ್ರತಿಕ್ರಿಯಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಗೂರು ಬಳಿ 15 ಸಾವಿರ ಎಕರೆ ತೆಂಗಿನ ತೋಟ ಕಪ್ಪುಹುಳ ರೋಗಕ್ಕೆ ಸಿಲುಕಿ ಮೌನವಾಗಿ ನಿಂತಿದೆ. ಗುಬ್ಬಿ ತಾಲ್ಲೂಕಿನ ಹೊಸಕೆರೆ, ನಿಟ್ಟೂರು, ಸಿ.ಎಸ್.ಪುರ ಹೋಬಳಿಗಳಲ್ಲಿ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಕಪ್ಪುಹುಳದ ಬಾಧೆ ಕಾಣುತ್ತದೆ. ಹುಳಿಯಾರು ಹೋಬಳಿ ಪೂರಾ ನುಸಿಪೀಡೆಗೆ ಬಲಿಯಾಗಿದೆ.

ತುರುವೇಕೆರೆ ತಾಲ್ಲೂಕಿನಲ್ಲಿ ಅತಿಯಾದ ಹೇಮಾವತಿ ನೀರಿನ ಪರಿಣಾಮ ರಸ ಸೋರುವ ರೋಗಕ್ಕೆ ತೋಟಗಳೇ ಇಲ್ಲವಾಗುತ್ತಿವೆ. ತೆಂಗು, ಕೊಬ್ಬರಿ ಬೆಲೆ ಕುಸಿಯಲು ಯೂರೋಪ್ ದೇಶಗಳಲ್ಲಿನ ಆರ್ಥಿಕ ಹಿಂಜರಿತ ಭೀತಿಯೂ ಕಾರಣ ಎನ್ನಲಾಗುತ್ತಿದೆ.

ವಿದೇಶಗಳಲ್ಲಿ ತೆಂಗಿನ ಎಣ್ಣೆಗೆ ಬೇಡಿಕೆ ತಗ್ಗಿರುವುದೇ ಕೊಬ್ಬರಿ, ತೆಂಗಿನ ಬೆಲೆ ಕುಸಿಯಲು ಕಾರಣ. ಬೇಡಿಕೆ ಇಲ್ಲದೆ ಕೊಚ್ಚಿನ್ ಮಾರುಕಟ್ಟೆಯಲ್ಲೂ ತೆಂಗು, ಕೊಬ್ಬರಿ ಎಣ್ಣೆ ಬೆಲೆ ಕುಸಿತ ಕಂಡಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

`ನೀರಾ~ ಮರೆತ ಸರ್ಕಾರ
ತೆಂಗಿನ ಕಾಯಿ ಬೆಲೆಯಲ್ಲಿ ನಿರಂತರತೆ ಕಾಪಾಡಿಕೊಳ್ಳಲು ತೆಂಗು ಉಪ ಉತ್ಪನ್ನಗಳ ಕಡೆ ಗಮನ ಹರಿಸಬೇಕು. ತೆಂಗಿನ `ನೀರಾ~ಗೆ ಬೇಡಿಕೆ ಇದೆ. ಆದರೆ ಲಿಕ್ಕರ್ ಲಾಬಿಗೆ ಮಣಿದು ಸರ್ಕಾರ ಇಲ್ಲಿಯವರೆಗೂ ನೀರಾ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಿಲ್ಲ. ನೀರಾದಿಂದ ಬೆಲ್ಲ, ಚಾಕ್ಲೆಟ್ ಮತ್ತಿತರ ಉತ್ಪನ್ನ ತಯಾರಿಸಬಹುದು. ಶ್ರೀಲಂಕಾದಲ್ಲಿ ನೀರಾ ಉತ್ಪನ್ನಗಳು ಪ್ರಸಿದ್ಧಿ ಪಡೆದಿವೆ.

ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನೀರಾ ಉಪ ಉತ್ಪನ್ನಗಳಿಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ ಎಂದು ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.