ADVERTISEMENT

ವಹಿವಾಟು:ತೈಲ ಬೆಲೆ ಪ್ರಭಾವ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 19:30 IST
Last Updated 26 ಫೆಬ್ರುವರಿ 2012, 19:30 IST

ನವದೆಹಲಿ(ಪಿಟಿಐ):ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾತೈಲದ ಬೆಲೆ ಈ ವಾರ ಪೇಟೆ ವಹಿವಾಟಿನ ಗತಿ ನಿರ್ಧರಿಸಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕಳೆದ ವಾರದ ವಹಿವಾಟಿನಲ್ಲಿ ಒಟ್ಟು 366 ಅಂಶಗಳನ್ನು ಕಳೆದುಕೊಂಡ ಸೂಚ್ಯಂಕ, ಶುಕ್ರವಾರ ವಹಿವಾಟಿನ ಅಂತ್ಯಕ್ಕೆ 18 ಸಾವಿರದ ಗಡಿ ಇಳಿದಿದೆ.

ಕಚ್ಚಾತೈಲ ಬೆಲೆ ಏರಿಕೆ ಜತೆಗೆ, ದೇಶದ ವಿತ್ತೀಯ ಕೊರತೆ ಅಂತರ ಹೆಚ್ಚುತ್ತಿರುವ ಸಂಗತಿ ಕೂಡ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲದು.  ಇರಾನ್ ಅಣು ಶಕ್ತಿ ಅಭಿವೃದ್ಧಿಪಡಿಸುವ ವಿವಾದದ ಹಿನ್ನೆಲೆಯಲ್ಲಿ, ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ ಕಳೆದ ಒಂಬತ್ತು ತಿಂಗಳಲ್ಲೇ ಗರಿಷ್ಠ ಮಟ್ಟ 124 ಡಾಲರ್‌ಗಳಿಗೆ ಏರಿಕೆಯಾಗಿದೆ. ಇದು ಹೂಡಿಕೆದಾರರ ಆತ್ಮವಿಶ್ವಾಸ ಕುಗ್ಗಿಸಿರುವ ಬೆಳವಣಿಗೆ ಎಂದು ಜಿಯೊಜಿತ್ ಬಿಎನ್‌ಪಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಅಲೆಕ್ಸ್ ಮಾಥ್ಯೂಸ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದಿನ ಏಳು ವಹಿವಾಟು  ಅವಧಿಗಳಲ್ಲಿ ವಿದೇಶಿ ವಿತ್ತೀಯ ಹೂಡಿಕೆದಾರರು (ಎಫ್‌ಐಐ) ಗರಿಷ್ಠ ಮಟ್ಟದ ಚಟುವಟಿಕೆ ನಡೆಸಿದ್ದಾರೆ. ಕಳೆದ ವಾರ ಒಟ್ಟು ್ಙ11,793 ಕೋಟಿಗಳಷ್ಟು ಮೊತ್ತದ `ಎಫ್‌ಐಐ~ ಹೂಡಿಕೆ ದಾಖಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಧ್ಯಂತರ ತ್ರೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರ ತಗ್ಗಿಸಲಿದೆ ಎನ್ನುವ ಸುದ್ದಿ ಸಹಜವಾಗಿಯೇ ಖರೀದಿ ಮತ್ತು ಮಾರಾಟದ ಒತ್ತಡ ಹೆಚ್ಚುವಂತೆ ಮಾಡಿದೆ ಎನ್ನುತ್ತಾರೆ `ವೆ-ಟು ವೆಲ್ತ್~ ಬ್ರೋಕರ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಬಳಿಗ.

ಅಮೆರಿಕದ ಆರ್ಥಿಕ ಪುನಶ್ಚೇತನ ಮತ್ತು ಗ್ರೀಕ್‌ನ ಪರಿಹಾರ ಕೊಡುಗೆಗೆ ಸಂಬಂಧಿಸಿದ ಸಂಗತಿಗಳು ಈ ವಾರವೂ ವಹಿವಾಟಿನ ಪ್ರಭಾವ ಬೀರಲಿವೆ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಬೊನಂಜಾ ಪೋರ್ಟ್‌ಪೊಲಿಯೊ ಸಂಸ್ಥೆಯ ಮುಖ್ಯ ಸಂಶೋಧಕ ಶರಣು ಗೋಯಲ್ ಹೇಳಿದ್ದಾರೆ.

ಈ ವಾರ ನಡೆಯಲಿರುವ `ಜಿ-20~ ಶೃಂಗಸಭೆ ಮತ್ತು ಶುಕ್ರವಾರ ಪ್ರಕಟಗೊಳ್ಳಲಿರುವ ಅಮೆರಿಕದ ಉದ್ಯೋಗ ದತ್ತಾಂಶಗಳು ಜಾಗತಿಕ ಷೇರುಪೇಟೆಗಳ ಮೇಲೆ ಪ್ರಭಾವ ಬೀರಲಿದೆ ಎಂದೂ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.