ADVERTISEMENT

ವಿಶ್ವಬ್ಯಾಂಕ್ ನೆರವು: ಪ್ರಣವ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ವಾಷಿಂಗ್ಟನ್ (ಪಿಟಿಐ): ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ವಿಶ್ವಬ್ಯಾಂಕ್ ಹೆಚ್ಚುವರಿ ಆರ್ಥಿಕ ನೆರವು ಒದಗಿಸಬೇಕು ಎಂದು ಭಾರತ ಆಗ್ರಹಿಸಿದೆ.

ವಿಶ್ವಬ್ಯಾಂಕ್ ಹೆಚ್ಚಿನ ನೆರವು ನೀಡುವುದರಿಂದ ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ (ಆರ್‌ಡಿಬಿಎಸ್) ಮೂಲಕ ಮೂಲ ಸೌಕರ್ಯ ಯೋಜನೆಗಳನ್ನು ವಿಸ್ತರಿಸಬಹುದು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೆಚ್ಚುವರಿ ನೆರವಿನ ತುರ್ತು ಅಗತ್ಯವಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಸಮತೋಲಿತ ಆರ್ಥಿಕ ಪುನಶ್ಚೇತನಕ್ಕೆ ಹೆಚ್ಚಿನ ನೆರವು ನೀಡುವ ಅಗತ್ಯ ಇದೆ. ಸದ್ಯ `ಎಂಡಿಬಿಎಸ್~ಗೆ ಸೀಮಿತ ಪ್ರಮಾಣದ ಧನ ಸಹಾಯ ಮಾತ್ರ ಲಭಿಸುತ್ತಿದೆ. ಇದರಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ (ಇಎಂಡಿಸಿಎಸ್) ಮೂಲ ಸೌಕರ್ಯ ಯೋಜನೆಗಳನ್ನು ನಿಗದಿತ ಮಟ್ಟದಲ್ಲಿ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಗಳೂ ಹಿನ್ನಡೆ ಅನುಭವಿಸಿವೆ ಎಂದು ಹೇಳಿದ್ದಾರೆ.

`ಸಿಯೋಲ್ ಅಭಿವೃದ್ಧಿ ಕಾರ್ಯಸೂಚಿ~ ಪ್ರಕಾರ ಭಾರತವು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸಿನ ನೆರವು ಒದಗಿಸುತ್ತಿದೆ. ಈ ಕಾರ್ಯಸೂಚಿ ಪ್ರಕಾರ `ಜಿ-20~ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆರ್ಥಿಕ ಪ್ರಗತಿಗೆ ನೆರವು ನೀಡಬೇಕಾಗಿದೆ. ವಿಶೇಷವಾಗಿ ಮೂಲಸೌಕರ್ಯ, ಆಹಾರ ಭದ್ರತೆ, ಉದ್ಯೋಗ, ಹೂಡಿಕೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಪರಸ್ಪರ ಸಹಾಯ ಮಾಡುವ ಒಪ್ಪಂದಕ್ಕೆ ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.