ADVERTISEMENT

ಶೀಘ್ರ ಆರು ರಿಲಯನ್ಸ್ ಮಾರ್ಕೆಟ್

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಬೆಂಗಳೂರು: `ರಿಲಯನ್ಸ್ ಮಾರ್ಕೆಟ್' ಬ್ರಾಂಡ್‌ನಡಿ ಇನ್ನೂ 6 ಸಗಟು ಮಾರಾಟ ಕೇಂದ್ರಗಳನ್ನು ದೇಶದ ವಿವಿಧೆಡೆ ಮುಂದಿನ ತ್ರೈಮಾಸಿಕದೊಳಗೆ ತೆರೆಯಲಾಗುವುದು ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರ್‍ಯಾಂಡಲ್ ಗಟೆರಿ ಹೇಳಿದರು.

ಬೆಂಗಳೂರಿನಲ್ಲಿ ಮೊದಲ, ದೇಶದ 2ನೇ `ರಿಲಯನ್ಸ್ ಮಾರ್ಕೆಟ್' ಸಗಟು ಮಾರಾಟ ಮಳಿಗೆಯನ್ನು ಬುಧವಾರ ಉದ್ಘಾಟಿಸಿ ಸುದ್ದಿಗೋಷ್ಠಿ ನಡೆಸಿದ ಅವರು, ದಕ್ಷಿಣ, ಉತ್ತರ, ಪಶ್ಚಿಮ ರಾಜ್ಯಗಳಲ್ಲಿ ತಲಾ 2 ಮಾರಾಟ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಕಿರಾಣಿ ಅಂಗಡಿ, ಹೊಟೆಲ್, ಸಣ್ಣ ವರ್ತಕರು ಸೇರಿದಂತೆ 85,000 ಮಂದಿ ಈಗಾಗಲೇ `ರಿಲಯನ್ಸ್ ಮಾರ್ಕೆಟ್' ಸದಸ್ಯತ್ವ ಪಡೆದುಕೊಂಡಿದ್ದಾರೆ. ಈ ಮಳಿಗೆ 50,000 ಚದರಡಿ ವಿಸ್ತಾರವಿದ್ದು, ಟಿವಿ, ಮೊಬೈಲ್ ಫೋನ್‌ನಿಂದ ಆರಂಭಿಸಿ, ದಿನಸಿ, ತರಕಾರಿವರೆಗೂ 8500 ಬಗೆಯ ಉತ್ಪನ್ನಗಳಿವೆ. 143 ಮಂದಿಗೆ ಉದ್ಯೋಗ ನೀಡಲಾಗಿದೆ. ಮಳಿಗೆ ಬಾಡಿಗೆ ಬಹಳ ಕಡಿಮೆ ಇದೆ. ನೇರ ಖರೀದಿ ವ್ಯವಸ್ಥೆಯೂ ಇರುವುದರಿಂದ ಸ್ಪರ್ಧಾತ್ಮಕ ಸಗಟು ಬೆಲೆಗೆ ಮಾರಾಟ ಸಾಧ್ಯವಾಗಲಿದೆ ಎಂದು ಹೇಳಿದರು.

ಚಿಲ್ಲರೆ ವ್ಯಾಪಾರಿಗಳು, ಹೋಟೆಲ್, ಸಗಟು ಲೆಕ್ಕದಲ್ಲಿ ಖರೀದಿಸುವ ಕಾರ್ಪೊರೇಟ್ ಸಂಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು `ಕ್ಯಾಶ್ ಆ್ಯಂಡ್ ಕ್ಯಾರಿ' ಮಾದರಿಯ ಮೊದಲ `ರಿಲಯನ್ಸ್ ಮಾರ್ಕೆಟ್' ಗುಜರಾತ್‌ನ ಅಹಮದಾಬಾದ್‌ನಲ್ಲಿ 2011ರ ಸೆಪ್ಟೆಂಬರ್‌ನಲ್ಲಿ ಆರಂಭಗೊಂಡಿತು. ಅಲ್ಲಿ 1.80 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.