ADVERTISEMENT

ಶುಲ್ಕ ಏರಿಕೆಗೆ ಅನುಮತಿ ನಕಾರ

ಬೆಂಗಳೂರು ವಿಮಾನ ನಿಲ್ದಾಣದ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST

ಹೈದರಾಬಾದ್ (ಪಿಟಿಐ): `ನಿಲ್ದಾಣ ಅಭಿವೃದ್ಧಿಗೆ ಬಳಕೆದಾರರಿಂದ ಸಂಗ್ರಹಿ ಸುವ ಶುಲ್ಕ'ವನ್ನು(ಯುಡಿಎಫ್) ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವುದಕ್ಕೆ ಸಂಬಂಧಿಸಿ `ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿ.'(ಬಿಐಎಎಲ್) ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ನೀಡಲು `ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ'(ಎಇಆರ್‌ಎ) ನಿರಾಕರಿಸಿದೆ.

ದೇಶೀಯ ಪ್ರಯಾಣಿಕರಿಂದ ಸಂಗ್ರಹಿಸುತ್ತಿದ್ದ ಶುಲ್ಕವನ್ನು ಶೇ 239ರಷ್ಟು (ರೂ783.09ಕ್ಕೆ) ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ವಿಧಿಸುತ್ತಿದ್ದ ಶುಲ್ಕವನ್ನು ಶೇ 79ರಷ್ಟು(ರೂ1700ಕ್ಕೆ) ಹೆಚ್ಚಿಸಲು `ಬಿಐಎಎಲ್' ಮುಂದಾಗಿತ್ತು.

ಹೈದರಾಬಾದ್ ಮೂಲದ ಮೂಲ ಸೌಕರ್ಯ ವಲಯದ ಅಭಿವೃದ್ಧಿ ಸಂಸ್ಥೆ `ಜಿವಿಕೆ ಸಮೂಹ'ದ ಅಂಗಸಂಸ್ಥೆಯಾದ`ಬಿಐಎಎಲ್', ಎಲ್ಲ ವಿಮಾನಗಳಿಗೂ ನಿಲ್ದಾಣದಲ್ಲಿ ಇಳಿಯುವುದಕ್ಕೆ ಶುಲ್ಕ ವಿಧಿಸಲು ಸಹ ಅನುಮತಿ ಕೋರಿತ್ತು. ಅದಕ್ಕೂ `ಎಇಆರ್‌ಎ' ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.

ದೇಶೀಯ ಪ್ರಯಾಣಿಕರಿಂದ ರೂ262.32 ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಸಂಚರಿಸುವವರಿಂದ ರೂ1049.27 `ಯುಡಿಎಫ್' ಸಂಗ್ರಹಿಸ ಬಹುದು ಎಂಬುದು `ಎಇಆರ್‌ಎ'ನ ಸಲಹೆಯಾಗಿದೆ. ಸದ್ಯ ಕ್ರಮವಾಗಿ ರೂ231.40 ಮತ್ತು ರೂ952.30  ಶುಲ್ಕ ಸಂಗ್ರಹಿಸಲಾಗುತ್ತಿದೆ.

`ಎಇಆರ್‌ಎ' ಕ್ರಮಕ್ಕೆ ಈಗಲೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇನ್ನೂ ಮಾತುಕತೆಗೆ ಅವಕಾಶವಿದೆ ಎಂದು `ಜಿವಿಕೆ' ವಕ್ತಾರರು ಸುದ್ದಿಸಂಸ್ಥೆಗೆ ಬುಧವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.