ಹುಬ್ಬಳ್ಳಿ: ಶೇಂಗಾ ದರ ಒಂದು ವಾರದಿಂದ ಭಾರಿ ಪ್ರಮಾಣದಲ್ಲಿ ಏರುತ್ತಿದೆ. ಸೆ. 30ರಿಂದ ಇದೇ 3ರ ನಡುವಿನ ಅವಧಿಯಲ್ಲಿ ಕ್ವಿಂಟಲ್‌ಗೆ ರೂ.7,000ದ ಗಡಿ ದಾಟಿ ದಾಖಲೆ ನಿರ್ಮಿಸಿದೆ.
ಇಲ್ಲಿನ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ದರ ದಾಖಲೆ ಬರೆದಿದೆ. ಭೀಕರ ಬರದಿಂದಾಗಿ ಈ ವರ್ಷ ಶೇಂಗಾ ಬೆಳೆಯಲಾಗದ ರೈತರು ಧಾರಣೆ ಕಂಡು ಕೊರಗುತ್ತಿದ್ದರೆ ಅಲ್ಪಸ್ವಲ್ಪ ಬೆಳೆ ಮಾಡಿರುವ ರೈತರು ಸಂತಸಗೊಂಡಿದ್ದಾರೆ.
ಈ ವರ್ಷ ಬಿತ್ತನೆ ಪ್ರಮಾಣ ತಗ್ಗಿದೆ. ಪರಿಣಾಮ ಆವಕವೂ ಕಡಿಮೆ ಇದೆ. ಹಾಗಾಗಿ ಶೇಂಗಾಕ್ಕೆ ದಾಖಲೆ ಬೆಲೆ ಬಂದಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಸೆ. 30ರ ವಹಿವಾಟಿನಲ್ಲಿ ಕ್ವಿಂಟಲ್‌ಗೆ ರೂ.7,099, ಸೆ. 31ರಂದು ದಾಖಲೆಯ ರೂ.7,110 ದರ ದೊರೆತಿದೆ. ನ. 3ರ ಧಾರಣೆ ಕ್ವಿಂಟಲ್‌ಗೆ ರೂ.7,019 ಇದ್ದಿತು. ಉಳಿದಂತೆ ರೂ.6,700ರಿಂದ 6,900ದವರೆಗೂ ಬೆಲೆ ಸಿಕ್ಕಿದೆ. ಮಾರುಕಟ್ಟೆ ಇತಿಹಾಸದಲ್ಲಿ ಶೇಂಗಾಕ್ಕೆ ಈ ರೀತಿ ದಾಖಲೆಯ ದರ ಸಿಕ್ಕಿಲ್ಲ ಎಂದು ಹುಬ್ಬಳ್ಳಿಯ ಕಲಕೋಟಿ ಟ್ರೇಡಿಂಗ್ ಕಂಪೆನಿಯ ಸಿದ್ಧಣ್ಣ ಕಲಕೋಟಿ ಹೇಳುತ್ತಾರೆ.
`ಈ ವರ್ಷ ಉತ್ತಮ ದರ ಸಿಕ್ಕಿದೆ. ಈವರೆಗೆ ಶೇಂಗಾ ದರದಲ್ಲಿ ಇಷ್ಟೊಂದು ಏರಿಕೆ ಕಂಡಿರಲೇ ಇಲ್ಲ. ಪ್ರತಿ ವರ್ಷವೂ ಇದೇ ದರ ಸಿಕ್ಕರೆ ರೈತರಿಗೆ ಅನುಕೂಲ~ ಎನ್ನುತ್ತಾರೆ ಕುಂದಗೋಳ ತಾಲ್ಲೂಕಿನ ಕಡಪಟ್ಟಿ ಗ್ರಾಮದ ರೈತ ಯಲ್ಲಪ್ಪ ಕಡಪಟ್ಟಿ.
ಬಿತ್ತನೆ, ಆವಕ ಇಳಿಕೆ
ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇಂಗಾ ಬಿತ್ತನೆ ಶೇ 65ರಷ್ಟು ಕುಸಿದಿದೆ. ಧಾರವಾಡ ಜಿಲ್ಲೆಯಲ್ಲಿ 2010ರಲ್ಲಿ 34,716 ಹೆಕ್ಟೆರ್‌ನಲ್ಲಿ ಬಿತ್ತನೆಯಾಗಿದ್ದ ಶೇಂಗಾ 2011ರಲ್ಲಿ 23,180 ಹೆಕ್ಟೇರ್‌ಗೆ ಕುಸಿಯಿತು. ಪ್ರಸಕ್ತ ವರ್ಷವಂತೂ 10,351 ಹೆಕ್ಟೆರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಆವಕದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಶೇಂಗಾ ಆವಕ ಶೇ 60ರಷ್ಟು ತಗ್ಗಿದೆ. 2010ರಲ್ಲಿ 2,92,405 ಕ್ವಿಂಟಲ್ ಆವಕವಾಗಿದ್ದರೆ 2011ರಲ್ಲಿ 1,21,668 ಕ್ವಿಂಟಲ್ ಇತ್ತು. ಪ್ರಸಕ್ತ ಸಾಲಿನಲ್ಲಿ ಈವರೆಗೆ ಕೇವಲ 47,448 ಕ್ವಿಂಟಲ್ ಆವಕವಾಗಿದೆ. ಮುಂದಿನ ಎರಡು ವಾರಗಳಲ್ಲಿ 30,000 ಕ್ವಿಂಟಲ್ ಆವಕವಾಗುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.