ADVERTISEMENT

ಶೇ 5ರಷ್ಟು ‘ಜಿಡಿಪಿ’ ಪ್ರಗತಿ ಅಂದಾಜು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಪ್ರಸಕ್ತ ಹಣ­ಕಾಸು ವರ್ಷದಲ್ಲಿ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ 5ರಷ್ಟು ಪ್ರಗತಿ ಕಾಣಲಿದೆ. ಚಾಲ್ತಿ ಖಾತೆ ಕೊರತೆ (ಸಿಎಡಿ) ‘ಜಿಡಿಪಿ’ಯಶೇ 3ಕ್ಕೆ ತಗ್ಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

‘ಬುಧವಾರ ಇಲ್ಲಿ ನಡೆದ ‘ದೆಹಲಿ ಆರ್ಥಿಕ ಶೃಂಗಸಭೆ’­ ಯಲ್ಲಿ ಮಾತನಾ­ಡಿದ ‘ಆರ್‌ಬಿಐ’ ಗವರ್ನರ್‌ ರಘುರಾಂ ರಾಜನ್‌, ‘ಜಿಡಿಪಿ’ ಚೇತರಿಸಿಕೊ­ಳ್ಳುತ್ತಿ­ರುವ ಸ್ಪಷ್ಟ ಸೂಚನೆ ಗಳು ಕಂಡು­ಬಂದಿವೆ ಎಂದರು.

‘ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ ಆರ್ಥಿಕ ಉತ್ತೇಜನ ಕೊಡು­ಗೆಗಳನ್ನು ಕಡಿತ ಮಾಡಿದರೆ,  ಭಾರ­ತವೂ ಸೇರಿ­ದಂತೆ ಪ್ರವರ್ಧ­ಮಾನಕ್ಕೆ ಬರುತ್ತಿರುವ ದೇಶಗಳು ಅದರ ಪರಿ­ಣಾಮಗಳನ್ನು ಎದು­ರಿಸಲು ಅಗತ್ಯ ಸಿದ್ಧತೆ ಮಾಡಿಕೊ­ಂಡಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದೇಶದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿದೆ. ಚಾಲ್ತಿ ಖಾತೆ ಕೊರತೆ (ಸಿಎಡಿ) ಕೂಡ ಗಣನೀಯವಾಗಿ ತಗ್ಗಿದೆ  ಈ ಎಲ್ಲ ಸಕಾರಾತ್ಮಕ ಬೆಳವಣಿಗೆಗಳಿಂದ ಅಮೆರಿ­ಕದ ಸೆಂಟ್ರಲ್‌ ಬ್ಯಾಂಕ್‌ನ ಕ್ರಮ ಭಾರ­ತದ ಮೇಲೆ ಅಷ್ಟೇನೂ ಪರಿಣಾಮ ಬೀರು­ವುದಿಲ್ಲ’ ಎಂದು ಅವರು ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5.7ರಷ್ಟ ‘ಜಿಡಿಪಿ’ ದಾಖಲಾಗಬಹುದು ಎಂದು ‘ಆರ್‌ಬಿಐ’ ಈ ಮೊದಲು ಅಂದಾಜು ಮಾಡಿತ್ತು. ಹಣಕಾಸು ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದ ನಂತರ ಅದನ್ನು ಶೇ 5ಕ್ಕೆ ತಗ್ಗಿಸಿತ್ತು. ಪ್ರಸಕ್ತ ಜುಲೈ–ಸೆಪ್ಟೆಂಬರ್‌ ತ್ರೈಮಾಸಿ­ಕದಲ್ಲಿ ‘ಜಿಡಿಪಿ’ ಶೇ 4.6ಕ್ಕೆ ಕುಸಿತ ಕಂಡಿದೆ.  2010–11ರಲ್ಲಿ ‘ಜಿಡಿಪಿ’ಯ ಶೇ 2.8ರಷ್ಟಿದ್ದ ‘ಸಿಎಡಿ’ 2012–13ನೇ ಸಾಲಿನಲ್ಲಿ ಶೇ 4.8ಕ್ಕೆ ಏರಿಕೆ ಕಂಡಿದೆ. ಆದರೆ, ವರ್ಷಾಂತ್ಯದಲ್ಲಿ ಇದು ಶೇ 3ಕ್ಕಿಂತ ಕೆಳಗಿರಲಿದೆ ಎಂದು ರಾಜನ್‌ ಹೇಳಿದರು.

ಆರ್‌ಬಿಐ ಆಗ್ರಹ
ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಮಸೂದೆ ಗಳನ್ನು ವಿಳಂಬ­ವಿಲ್ಲದೆ ಅಂಗೀಕ­ರಿಸಲು ಎಲ್ಲ ರಾಜಕೀಯ ಪಕ್ಷಗಳು ಆಸಕ್ತಿ ತೋರಿ­ಸಬೇಕು ಎಂದು  ರಘುರಾಂ ರಾಜನ್‌ ಆಗ್ರಹಿಸಿದ್ದಾರೆ. 2014ರ ಚುನಾವಣೆ ನಂತರ ಮಸೂದೆ ಗಳಿಗೆ ಒಪ್ಪಿಗೆ ದೊರೆಯುವುದು ಸವಾಲಿನ ವಿಷಯ  ಎಂದ ಅವರು, ವಿಳಂಬ ನೀತಿಯಿಂದ ಮೂಲ­ಸೌಕರ್ಯ ವಲಯದ ಹಲವು ಬೃಹತ್‌ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.