ADVERTISEMENT

ಶೇ 7.1 ಜಿಡಿಪಿ ಸಾಧನೆ ಕಷı

ಆರ್ಥಿಕ ಪ್ರಗತಿಯಲ್ಲಿ ಚೀನಾವನ್ನು ಹಿಂದಿಕ್ಕಿಲ್ಲ: ಚಿದಂಬರಂ

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 19:40 IST
Last Updated 16 ಜನವರಿ 2016, 19:40 IST
-ಚಿದಂಬರಂ
-ಚಿದಂಬರಂ   

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ (2015–16) ದೇಶದ ಒಟ್ಟಾರೆ ಆಂತರಿಕ ಉತ್ಪಾದನೆ (ಜಿಡಿಪಿ) ಶೇ 7ಕ್ಕಿಂತಲೂ ಕಡಿಮೆ ಇರಲಿದೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದರು.

2015–16ರಲ್ಲಿ ಜಿಡಿಪಿ ಪ್ರಗತಿ ಶೇ 7.1ರಷ್ಟಿರಲಿದೆ ಎಂದು ಕೇಂದ್ರ ಸರ್ಕಾರ ತನ್ನ ಇತ್ತೀಚಿನ ಆರ್ಥಿಕ ಮುನ್ನೋಟ ದಲ್ಲಿ ಮಾಡಿದ ಅಂದಾಜಿಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ಶೇ 8.5ರಷ್ಟು ಜಿಡಿಪಿ ಪ್ರಗತಿ ಸಾಧಿಸುವ ಭರವಸೆಯನ್ನು ಸರ್ಕಾರ ವರ್ಷದ ಆರಂಭದಲ್ಲಿ ನೀಡಿತ್ತು. ಇದೀಗ  ವರ್ಷದ ಅಂತ್ಯದಲ್ಲಿರುವಾಗ ಶೇ 7.1ರಷ್ಟಾದರೂ ಪ್ರಗತಿ ಸಾಧಿಸುವ ವಿಶ್ವಾಸವ್ಯಕ್ತಪಡಿಸಿದೆ. ಆದರೆ ಶೇ 7ರಷ್ಟು ಪ್ರಗತಿ ಸಾಧಿಸುವುದೂ ಕಷ್ಟವಾಗಲಿದೆ ಎಂದರು.

ಇಲ್ಲಿ ಶನಿವಾರ ಶ್ರೀರಾಮ್‌  ವಾಣಿಜ್ಯ ಕಾಲೇಜಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ಇತ್ತೀಚಿನ ಕೈಗಾರಿಕಾ ಪ್ರಗತಿ ಸೂಚ್ಯಂಕ ಮತ್ತು ರಫ್ತು ವಹಿವಾಟಿನ ಅಂಕಿ–ಅಂಶಗಳನ್ನು ಗಮನಿಸಿದರೆ ಸರ್ಕಾರ ನಿರೀಕ್ಷಿಸಿದಷ್ಟು ಪ್ರಗತಿ ಸಾಧ್ಯವಿಲ್ಲ ಎಂದು ತಿಳಿಸಿದರು.

ಸತತ 13ನೇ ತಿಂಗಳಿನಲ್ಲಿಯೂ ದೇಶದ ರಫ್ತು ವಹಿವಾಟು ಇಳಿಮುಖ ಹಾದಿಯಲ್ಲೇ ಸಾಗಿದೆ. ನವೆಂಬರ್‌ ತಿಂಗಳಿನಲ್ಲಿ 24 ಕೈಗಾರಿಕೆಗಳಲ್ಲಿ 17 ಕೈಗಾರಿಕೆಗಳ ಪ್ರಗತಿ ಋಣಾತ್ಮಕ ಮಟ್ಟದಲ್ಲಿದೆ. ಉಕ್ಕು, ಸಿಮೆಂಟ್‌, ತೈಲ ಮತ್ತು ಅನಿಲ ಕಂಪೆನಿಗಳೂ ಸಹ ನಷ್ಟದಲ್ಲಿವೆ ಎಂದು ದೇಶದ ಕೈಗಾರಿಕಾ ವಲಯದ ಚಿತ್ರಣ ನೀಡಿದರು.

ಚೀನಾವನ್ನು ಹಿಂದಿಕ್ಕಿಲ್ಲ: ಜಿಡಿಪಿ ಪ್ರಗತಿಯಲ್ಲಿ ಭಾರತ ಚೀನಾವನ್ನೂ ಹಿಂದಿಕ್ಕಿದೆ ಎಂಬುದನ್ನು ಅವರು ತಳ್ಳಿಹಾಕಿದರು. ಚೀನಾ ಸತತ 30 ವರ್ಷಗಳ ವರೆಗೆ ಸರಾಸರಿ ಶೇ 10ರಂತೆ ಪ್ರಗತಿ ಸಾಧಿಸಿದೆ. ಆದರೆ ಭಾರತ ಪ್ರಗತಿ ಸಾಧಿಸಲಾರಂಭಿಸಿದ್ದು 1980ರಿಂದ ಈಚೆಗೆ.  ಸದ್ಯ, ಚೀನಾದ ಆರ್ಥಿಕತೆಯು  ಭಾರತಕ್ಕಿಂತಲೂ ಮೂರು ಪಟ್ಟು ಹೆಚ್ಚಿನ ಪ್ರಗತಿ ಸಾಧಿಸಿದೆ. ಹೀಗಾಗಿ, ಜಿಡಿಪಿ ಪ್ರಗತಿಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ಹೇಳುವುದರಲ್ಲಿ ಅರ್ಥ ಇಲ್ಲ ಎಂದು ಪ್ರತಿಪಾದಿಸಿದರು.

ಅಮೆರಿಕದ ಪ್ರಗತಿಗೆ ಹೋಲಿಕೆ ಮಾಡುವಾಗಲೂ ಇದೇ ವಾದ ಮುಂದಿಡಬಹುದು. ಭಾರತದವರು ಅಮೆರಿಕದವರಷ್ಟು ಏಳಿಗೆ ಹೊಂದಿಲ್ಲ.  ಭಾರತದ ಆರ್ಥಿಕತೆ ಅಮೆರಿಕದ ಆರ್ಥಿಕತೆಗಿಂತ ಬಲಿಷ್ಠವಾಗಿಲ್ಲ. ಇಂತಹ ಹೋಲಿಕೆ, ಅಭಿಪ್ರಾಯಗಳನ್ನು ನೀಡು ವಾಗ ದೇಶದ ಆರ್ಥಿಕತೆಯ ಗಾತ್ರವನ್ನು ಪರಿಗಣಿಸಬೇಕಾಗುತ್ತದೆ ಎಂದರು.

ಹೊಸ ಸಮಸ್ಯೆಗಳು: ಈಗಿನ ಸರ್ಕಾರ ಹೊಸ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಅದರಲ್ಲೂ ಚೀನಾದ ಮಂದ ಆರ್ಥಿಕತೆ ಹೆಚ್ಚು ಪರಿಣಾಮ ಬೀರಿದೆ. ಇದರಿಂದ ದೇಶದ ರಫ್ತು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಹೀಗಾಗಿ, ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಚಿದಂಬರಂ ಸಲಹೆ ನೀಡಿದರು. 

ಮುಂದಿನ 10, 20, 30 ವರ್ಷಗಳಲ್ಲಿ ಭಾರತ ಸರಾಸರಿ ಶೇ 8ರಂತೆ ಪ್ರಗತಿ ಸಾಧಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.