ADVERTISEMENT

ಷೇರುದಾರರ ಜತೆ ಮತ್ತೆ ಸಂವಹನ ಇನ್ಫೊಸಿಸ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಷೇರುದಾರರ ಜತೆ ಮತ್ತೆ ಸಂವಹನ ಇನ್ಫೊಸಿಸ್‌ ನಿರ್ಧಾರ
ಷೇರುದಾರರ ಜತೆ ಮತ್ತೆ ಸಂವಹನ ಇನ್ಫೊಸಿಸ್‌ ನಿರ್ಧಾರ   

ನವದೆಹಲಿ: ಸಂಸ್ಥೆಯ ಷೇರುದಾರರ ಜತೆ ಇನ್ನೊಂದು ಸುತ್ತಿನ ಸಭೆ ನಡೆಸಿ ಅವರಿಂದ ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲು ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್ ನಿರ್ಧರಿಸಿದೆ.

ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿನ ನಿರ್ದೇಶಕ ಮಂಡಳಿಯು ಮುಂದಿನ ಕೆಲ ವಾರಗಳಲ್ಲಿ ಷೇರುದಾರರ ಜತೆ ನೇರವಾಗಿ ಇಲ್ಲವೆ ಆನ್‌ಲೈನ್‌ನಲ್ಲಿ ಪ್ರಶ್ನೋತ್ತರ ಮೂಲಕ ಸಂವಾದ ನಡೆಸಲು ಉದ್ದೇಶಿಸಿದೆ.

‘ಷೇರುದಾರರ ಜತೆಗಿನ ಸಂವಾದ ಕಾರ್ಯಕ್ರಮದ ಮೊದಲ ಸುತ್ತು ಈಗಾಗಲೇ ಪೂರ್ಣಗೊಂಡಿದೆ. ಎರಡನೆ ಸುತ್ತಿನ ಸಲಹೆ ಪಡೆಯುವುದಕ್ಕೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು’ ಎಂದು ನಿಲೇಕಣಿ ಅವರು ಇತ್ತೀಚೆಗೆ ನಡೆದ ಹೂಡಿಕೆದಾರರ ಜತೆಗಿನ ಭೇಟಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ADVERTISEMENT

‘ಷೇರುದಾರರ ಜತೆಗಿನ ಈ ಸಂವಾದ ಆಧರಿಸಿದ ಪೂರ್ಣ ಪ್ರಮಾಣದ ವರದಿಯನ್ನು ಸಂಸ್ಥೆಯು ಜನವರಿ ತಿಂಗಳಿನಲ್ಲಿ ಮೂರನೇ ತ್ರೈಮಾಸಿಕದ ಸಾಧನೆ ಪ್ರಕಟಿಸುವ ಸಂದರ್ಭದಲ್ಲಿ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

‘ನಾಮಕರಣ ಮತ್ತು ಸಂಭಾವನೆ ಸಮಿತಿಯು ಸಂಸ್ಥೆಯು ದೀರ್ಘಾವಧಿಯಲ್ಲಿ ಅಳವಡಿಸಿಕೊಳ್ಳಬೇಕಾದ ಆಡಳಿತ ಸ್ವರೂಪ ಕುರಿತು ವರದಿ ಸಲ್ಲಿಸಲಿದೆ. ಜನವರಿ ವೇಳೆಗೆ ಇದರ ಅಂತಿಮ ವರದಿಯು ನಿರ್ದೇಶಕ ಮಂಡಳಿಕೆ ಸಲ್ಲಿಕೆಯಾಗಲಿದೆ’ ಎಂದು ನಂದನ್‌ ಹೇಳಿದ್ದಾರೆ.

ಸಂಸ್ಥೆಯಲ್ಲಿ ಕಾರ್ಪೊರೇಟ್‌ ಆಡಳಿತದ ನಿಯಮಗಳನ್ನು ಸರಿಯಾಗಿ ಪಾಲಿಸಲಾಗುತ್ತಿಲ್ಲ ಎಂದು  ಸಹ ಸ್ಥಾಪಕ ಎನ್‌. ಆರ್‌. ನಾರಾಯಣ ಮೂರ್ತಿ ಅವರು ಆಕ್ಷೇಪಿಸಿದ್ದರಿಂದ ನಿರ್ದೇಶಕ ಮಂಡಳಿ ಮತ್ತು ಸಹ ಸ್ಥಾಪಕರ ನಡುವಣ ಸಂಘರ್ಷವು ಬೀದಿಗೆ ಬಂದಿತ್ತು.

ಸಿಇಒ ವಿಶಾಲ್‌ ಸಿಕ್ಕಾ ಮತ್ತು ನಿರ್ದೇಶಕ ಮಂಡಳಿಯು ಆಗಸ್ಟ್‌ ತಿಂಗಳಿನಲ್ಲಿ ರಾಜೀನಾಮೆ ಸಲ್ಲಿಸಿದ್ದರಿಂದ ಸಹ ಸ್ಥಾಪಕ ನಂದನ್‌ ನಿಲೇಕಣಿ ಅವರನ್ನು ಕಾರ್ಯನಿರ್ವಾಹಕಯೇತರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.