ADVERTISEMENT

ಷೇರುಪೇಟೆಗೆ ‘ಆರ್‌ಬಿಐ’ ಭೀತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST
ಷೇರುಪೇಟೆಗೆ ‘ಆರ್‌ಬಿಐ’ ಭೀತಿ
ಷೇರುಪೇಟೆಗೆ ‘ಆರ್‌ಬಿಐ’ ಭೀತಿ   

ನವದೆಹಲಿ(ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಮತ್ತು ಆರ್ಥಿಕ ಉತ್ತೇಜನ ಕೊಡು­ಗೆಗಳ ಕಡಿತಕ್ಕೆ ಸಂಬಂಧಿಸಿದಂತೆ ಅಮೆರಿಕದ ಸೆಂಟ್ರಲ್‌ ಬ್ಯಾಂಕ್‌ ನಡೆಸಲಿರುವ ಸಭೆ ಈ ವಾರದ ಷೇರುಪೇಟೆ ವಹಿವಾಟು ನಿರ್ಧರಿಸಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ (ಡಬ್ಲ್ಯುಪಿಐ) ಹಣದುಬ್ಬರ ಅಂಕಿ ಅಂಶ ಗಳು ಸೋಮವಾರ ಪ್ರಕಟಗೊ­ಳ್ಳಲಿವೆ.  ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿ ಸಿದ ಹಣದುಬ್ಬರ ದರ ನವೆಂಬರ್‌ನಲ್ಲಿ 9 ತಿಂಗಳ ಗರಿಷ್ಠ ಮಟ್ಟವಾದ ಶೇ 11.24ಕ್ಕೆ ಜಿಗಿದಿದೆ. ಈ ಎಲ್ಲ ಅಂಶ ಗಳನ್ನು ಆಧರಿಸಿ ‘ಆರ್‌ಬಿಐ’ ಡಿ.18 ರಂದು  ಹಣಕಾಸು ನೀತಿ ಪ್ರಕಟಿ­ಸಲಿದೆ. ಹೀಗಾಗಿ ಸೋಮವಾರದಿಂದಲೇ ಪೇಟೆ ಯಲ್ಲಿ ಏರಿಳಿತ ನಿರೀಕ್ಷಿಸಬಹುದು ಎಂದು ಐಸಿಐಸಿಐ ಬ್ಯಾಂಕಿನ ತಜ್ಞರ ತಂಡ ಅಂದಾಜು ಮಾಡಿದೆ. ನವೆಂಬರ್‌ನಲ್ಲಿ ಸಗಟು ಹಣದುಬ್ಬರ ಶೇ 7ರ ಆಸು ಪಾಸಿಗೆ ಏರಿಕೆ ಕಾಣಲಿದೆ ಎಂದೂ ಈ ತಂಡ ಹೇಳಿದೆ.

‘ಈಗಿನ ಪರಿಸ್ಥಿತಿ ನೋಡಿದರೆ ‘ಆರ್‌ಬಿಐ’ ಅಲ್ಪಾವಧಿ ಬಡ್ಡಿ ದರವಾದ ರೆಪೊ ದರವನ್ನು ಶೇ 0.50ರಷ್ಟು ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ’  ಎಂದು ಇಂಡಿಯಾ ಇನ್ಫೊಲೈನ್‌ ಹೇಳಿದೆ.

ಡಿ. 9ರಂದು ಸೂಚ್ಯಂಕ ಸಾರ್ವಕಾ ಲಿಕ ದಾಖಲೆ ಮಟ್ಟ ತಲುಪಿತ್ತು. ಆದರೆ, ನಂತರ ಹಣುದಬ್ಬರ ಮತ್ತು ರೂಪಾಯಿ ಅಪಮೌಲ್ಯದ ಭೀತಿಯಿಂದ ಸೂಕ್ಷ್ಮ ವಲಯದ ಕಂಪೆನಿಗಳ ಸೂಚ್ಯಂಕ 600 ಅಂಶಗಳಷ್ಟು ಕುಸಿತ ಕಂಡಿದೆ. ಹೀಗಾಗಿ ಕಳೆದ ವಾರಾಂತ್ಯದಲ್ಲಿ ಸೂಚ್ಯಂಕ 20,715 ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ.

ಒಟ್ಟಾರೆ ಪೇಟೆಯಲ್ಲಿ ನಕಾರಾತ್ಮಕ ವಾತಾವರಣ ಇದ್ದರೂ, ಈ ವಾರ ಸೂಚ್ಯಂಕ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ರೆಲಿಗೇರ್‌ ಸೆಕ್ಯುರಿಟೀಸ್‌ನ ರಿಟೇಲ್‌ ವಿಭಾಗದ ಅಧ್ಯಕ್ಷ ಜಯಂತ್‌ ಮಂಗಳೀಕ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಆರ್‌ಬಿಐ’ ರೆಪೊ ದರ ಹೆಚ್ಚಿಸಿದರೆ ಷೇರುಪೇಟೆ ಖಂಡಿತ ಅದಕ್ಕೆ  ನಕಾರಾ ತ್ಮಕವಾಗಿ ಸ್ಪಂದಿಸಲಿದೆ’ ಎಂದು ‘ವೆರಾಸಿಟಿ ಬ್ರೋಕಿಂಗ್ ಸರ್ವಿಸಸ್‌’ ಸಂಸ್ಥೆಯ ಮುಖ್ಯಸ್ಥ ಜಿಗ್ನೇಶ್‌ ಚೌಧರಿ ವಿಶ್ಲೇಷಿಸಿದ್ದಾರೆ.

ಅಮೆರಿಕದ ಸೆಂಟ್ರಲ್‌ ಬ್ಯಾಂಕಿನ ಮುಕ್ತ ಮಾರುಕಟ್ಟೆ ಸಮಿತಿ (ಎಫ್‌ಒ ಎಂಸಿ) ಸಭೆ ಡಿ.17, 18 ರಂದು ನಡೆಯ ಲಿದೆ. ಆರ್ಥಿಕ ಉತ್ತೇಜನ ಕೊಡುಗೆಗಳ ಸ್ಥಗಿತಕ್ಕೆ ಸಂಬಂಧಿಸಿದಂತೆ ಈ ಸಭೆ ಮಹತ್ವದ ನಿರ್ಣಯ ಕೈಗೊಳ್ಳಲಿದೆ. ಭಾರತವೂ ಸೇರಿದಂತೆ ಪ್ರವರ್ಧ­ಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳ ಮೇಲೆ ಈ ಸಂಗತಿ ತೀವ್ರ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಇನ್ನೊಂದೆಡೆ ಅಮೆರಿಕದ ರಿಟೇಲ್‌ ಮತ್ತು ಉದ್ಯೋಗ ಮಾರುಕಟ್ಟೆ ಚೇತರಿಕೆ ಕಂಡಿದೆ. ಇದು ಕೂಡ ಜಾಗತಿಕ ಷೇರುಪೇಟೆಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.