ಮುಂಬೈ (ಪಿಟಿಐ): ಮುಂಬೈ ಷೇರುಪೇಟೆಯು ಗುರುವಾರದ ವಹಿವಾಟಿನಲ್ಲಿ ಭಾರಿ ಹಿನ್ನಡೆ ಕಂಡಿದ್ದು, ಸಂವೇದಿ ಸೂಚ್ಯಂಕವು 704 ಅಂಶಗಳಷ್ಟು ಕುಸಿತ ದಾಖಲಿಸಿದ್ದರೆ ಮಾರುಕಟ್ಟೆ ಮೌಲ್ಯದ ಪ್ರಕಾರ ಹೂಡಿಕೆದಾರರ ಸಂಪತ್ತು ರೂ. 2 ಲಕ್ಷ ಕೋಟಿಗಳಷ್ಟು ಕರಗಿದೆ.
ಅಮೆರಿಕದ ಅರ್ಥ ವ್ಯವಸ್ಥೆ ಬಗ್ಗೆ ಅಲ್ಲಿನ ಕೇಂದ್ರೀಯ ಬ್ಯಾಂಕ್ (ಫೆಡರಲ್ ರಿಸರ್ವ್) ಆತಂಕ ವ್ಯಕ್ತಪಡಿಸಿದ್ದರಿಂದ ವಿಶ್ವದಾದ್ಯಂತ ಷೇರುಪೇಟೆಗಳ ಹೂಡಿಕೆದಾರರು ಆತಂಕಗೊಂಡಿದ್ದಾರೆ. ಈ ಆತಂಕವು ಸ್ಥಳೀಯ ಷೇರು ಪೇಟೆಯಲ್ಲಿಯೂ ಪ್ರತಿಫಲನಗೊಂಡಿತು.
ಹೂಡಿಕೆದಾರರು ತಮ್ಮ ಬಳಿಯಲ್ಲಿದ್ದ ಬಹುತೇಕ ಷೇರುಗಳನ್ನು ಮಾರಾಟ ಮಾಡಿ ಕೈತೊಳೆದುಕೊಂಡರು. ಎಲ್ಲ 13 ವಲಯದ ಷೇರುಗಳು ತೀವ್ರ ನಷ್ಟ ಕಂಡವು. ರೂಪಾಯಿಯು ಅಮೆರಿಕದ ಕರೆನ್ಸಿ ಡಾಲರ್ ಎದುರು ಇನ್ನಷ್ಟು (ಪ್ರತಿ ಡಾಲರ್‌ಗೆ ರೂ. 49.36) ದುರ್ಬಲಗೊಂಡಿದೆ.
2009ರ ಜುಲೈ 13 ನಂತರದ ಅತಿ ಕಡಿಮೆ ಮೌಲ್ಯ ಇದಾಗಿದೆ. ಈ ವಿದ್ಯಮಾನವೂ ಹೂಡಿಕೆದಾರರ ಚಿಂತೆ ಹೆಚ್ಚಿಸಿದೆ. ಜಾಗತಿಕ ಅರ್ಥವ್ಯವಸ್ಥೆ ಕುಂಠಿತಗೊಳ್ಳುವ ಭೀತಿ ಹಿನ್ನೆಲೆಯಲ್ಲಿ, ಸಾಂಸ್ಥಿಕ ಹಣಕಾಸು ನಿಧಿಗಳು ನಷ್ಟ ಸಾಧ್ಯತೆ ಹೆಚ್ಚಿಗೆ ಇರುವ ಷೇರುಗಳಿಂದ ಹಣ ವಾಪಸ್ ಪಡೆಯುತ್ತಿವೆ.
ಐರೋಪ್ಯ ಒಕ್ಕೂಟದ ಸಾಲದ ಬಿಕ್ಕಟ್ಟಿನ ಕಾರಣಕ್ಕೆ ಅಮೆರಿಕದ ಅರ್ಥ ವ್ಯವಸ್ಥೆಗೆ ಭಾರಿ ಹಿನ್ನಡೆಯಾಗಲಿದೆ ಎಂದು ಫೆಡರಲ್ ರಿಸರ್ವ್ ಎಚ್ಚರಿಸಿರುವುದೂ ಹೂಡಿಕೆದಾರರಲ್ಲಿ ತೀವ್ರ ನಿರಾಶೆ ಮೂಡಿಸಿದೆ.
ಅಮೆರಿಕದ ಷೇರು ಸೂಚ್ಯಂಕಗಳಾದ ಡೋವ್ ಜೋನ್ಸ್ ಮತ್ತು ನಾಸ್ದಾಕ್ ಕ್ರಮವಾಗಿ ಶೇ 2.49 ಮತ್ತು ಶೇ 2.01ರಷ್ಟು ಕುಸಿದಿವೆ. ಇದು ಜಾಗತಿಕ ಷೇರುಪೇಟೆಯಲ್ಲಿ ಮತ್ತೊಮ್ಮೆ ತಲ್ಲಣ ಮೂಡಿಸಿದೆ. ಹಾಂಕಾಂಗ್, ಜಪಾನ್, ಇಂಡೋನೇಷ್ಯಾ, ತೈವಾನ್, ರಷ್ಯಾ, ಪೋಲಂಡ, ಲಂಡನ್, ಪ್ಯಾರಿಸ್‌ಗಳಲ್ಲಿನ ಷೇರುಪೇಟೆಗಳಲ್ಲಿಯೂ ಕುಸಿತ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.