ADVERTISEMENT

ಷೇರುಪೇಟೆ ಮೇಲೆ ಆರ್‌ಬಿಐ ಹಣಕಾಸು ನೀತಿಯ ಪ್ರಭಾವ

ಪಿಟಿಐ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ಷೇರುಪೇಟೆ ಮೇಲೆ ಆರ್‌ಬಿಐ ಹಣಕಾಸು ನೀತಿಯ ಪ್ರಭಾವ
ಷೇರುಪೇಟೆ ಮೇಲೆ ಆರ್‌ಬಿಐ ಹಣಕಾಸು ನೀತಿಯ ಪ್ರಭಾವ   

ನವದೆಹಲಿ: ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ, ಜಿಎಸ್‌ಟಿ ಮತ್ತು  ಮುಂಗಾರು ಮಳೆ ಸುರಿಯುವ ಪ್ರಮಾಣವು ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ ಎಂದು ಪರಿಣತರು ಹೇಳಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಮಂಗಳವಾರ ಮತ್ತು ಬುಧವಾರ ಹಣಕಾಸು ನೀತಿ ಪರಾಮರ್ಶೆ ನಡೆಸಲಿದೆ. ಮೂಲಸೌಕರ್ಯ ಮತ್ತು ತಯಾರಿಕಾ ವಲಯದ ಪ್ರಗತಿ ಭಾರಿ ಕುಸಿತ ಕಂಡಿರುವುದರಿಂದ ಬಡ್ಡಿದರ ತಗ್ಗಿಸುವಂತೆ ಉದ್ಯಮವಲಯ ಒತ್ತಾಯಿಸಿದೆ. ಹೀಗಾಗಿ ಆರ್‌ಬಿಐ ತೆಗೆದುಕೊಳ್ಳುವ ನಿರ್ಧಾರವು ಅಲ್ಪಾವಧಿಗೆ ಷೇರುಪೇಟೆ ಮೇಲೆಯೂ ಪ್ರಭಾವ ಬೀರಲಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಪ್ರಮುಖ 6 ಸರಕುಗಳಿಗೂ ಈಗ ತೆರಿಗೆ ದರ ನಿಗದಿಯಾಗಿದೆ. ಬಾಕಿ ಇದ್ದ ಜಿಎಸ್‌ಟಿ ಮತ್ತು ಐ.ಟಿ ರಿಟರ್ನ್ಸ್‌ ನಿಯಮಗಳಿಗೂ ಜಿಎಸ್‌ಟಿ ಮಂಡಳಿಯಲ್ಲಿ ಒಪ್ಪಿಗೆ ದೊರೆತಿದೆ. ಹೀಗಾಗಿ ನಿಗದಿಯಾಗಿರುವಂತೆ ಜುಲೈ 1 ರಿಂದಲೇ ಜಿಎಸ್‌ಟಿ ಜಾರಿಗೆ ಎಲ್ಲಾ ರಾಜ್ಯಗಳು ಒಪ್ಪಿಗೆ ನೀಡಿವೆ.

ADVERTISEMENT

ಈ ಸುದ್ದಿಯು ಸೋಮವಾರ ಷೇರುಪೇಟೆ ವಹಿವಾಟಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ.

ಜಿಎಸ್‌ಟಿಯಿಂದ ಅಲ್ಪಾವಧಿಗೆ ವ್ಯಾಪಾರದ ಮೇಲೆ ಋಣಾತ್ಮಕ ಪರಿಣಾ ಬೀರುವ ಸಾಧ್ಯತೆ ಇದ್ದು, ಷೇರುಪೇಟೆಯಲ್ಲಿ ವಹಿವಾಟು ಚಂಚಲವಾಗಿರುವ ಸಾಧ್ಯತೆ ಇದೆ. ಆದರೆ,  ದೀರ್ಘ ಅವಧಿಯಲ್ಲಿ  ಹೆಚ್ಚು ಲಾಭದಾಯಕವಾಗಲಿದ್ದು, ಖರೀದಿ ಚಟುವಟಿಕೆಯನ್ನು ಹೆಚ್ಚಿಸಲಿದೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್‌ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 245 ಅಂಶ ಏರಿಕೆ ಕಂಡು, 31,273 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

* ಹೊಸ ತೆರಿಗೆ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳ್ಳಲಿದೆ ಎನ್ನುವುದನ್ನು ಷೇರುಪೇಟೆ ಕುತೂಹಲದಿಂದ ಎದುರುನೋಡುತ್ತಿದೆ

–ಜಮೀತ್ ಮೋದಿ, ಸ್ಯಾಮ್ಕೊ ಸೆಕ್ಯುರಿಟೀಸ್‌ನ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.