ADVERTISEMENT

ಷೇರುಪೇಟೆ ಸೂಚ್ಯಂಕ ಹೊಸ ಜಿಗಿತ

ಪಿಟಿಐ
Published 1 ನವೆಂಬರ್ 2017, 19:30 IST
Last Updated 1 ನವೆಂಬರ್ 2017, 19:30 IST
ಷೇರುಪೇಟೆ ಸೂಚ್ಯಂಕ ಹೊಸ ಜಿಗಿತ
ಷೇರುಪೇಟೆ ಸೂಚ್ಯಂಕ ಹೊಸ ಜಿಗಿತ   

ಮುಂಬೈ: ಉದ್ಯಮ ಸ್ನೇಹಿ ಉಪಕ್ರಮಗಳ ಮೂಲಕ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಭಾರತವು ಬಡ್ತಿ ಪಡೆದಿರುವುದು ದೇಶಿ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿ, ಸಂವೇದಿ ಸೂಚ್ಯಂಕವು ಹೊಸ ಎತ್ತರಕ್ಕೆ ಜಿಗಿತ ಕಾಣುವಂತಾಗಿದೆ.

‘ಬಿಎಸ್‌ಇ’ 387 ಅಂಶಗಳಷ್ಟು ಏರಿಕೆ ಕಂಡು (33,600 ಅಂಶ) ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ ಇದೇ ಮೊದಲ ಬಾರಿಗೆ 10,450 ಅಂಶಗಳಿಗೆ ತಲುಪಿತು. ಸಂವೇದಿ ಸೂಚ್ಯಂಕವು ಅಕ್ಟೋಬರ್‌ 30ರಂದು 33,266 ಅಂಶಗಳಿಗೆ ತಲುಪಿತ್ತು.

ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆಯು 6 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿರುವುದು, ಜಾಗತಿಕ ಷೇರುಪೇಟೆಗಳಲ್ಲಿನ ಮುನ್ನಡೆಯ ಫಲವಾಗಿ ದೇಶಿ ಪೇಟೆಯಲ್ಲಿಯೂ ಪ್ರಮುಖ ಷೇರುಗಳ ಬೆಲೆಗಳು ಗಮನಾರ್ಹ ಏರಿಕೆ ಕಂಡವು.

ADVERTISEMENT

ಕೆಲ ಉದ್ದಿಮೆ ಸಂಸ್ಥೆಗಳ ಹಣಕಾಸು ಸಾಧನೆಯು ನಿರೀಕ್ಷೆಗಿಂತ ಉತ್ತಮವಾಗಿರುವುದು ಕೂಡ ಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿದೆ.

ದೂರಸಂಪರ್ಕ, ಬ್ಯಾಂಕ್, ರಿಯಾಲ್ಟಿ, ಲೋಹ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕು (ಎಫ್‌ಎಂಸಿಜಿ) ಮತ್ತು ಕೇಂದ್ರೋದ್ಯಮಗಳ ಷೇರುಗಳಲ್ಲಿ ಹೆಚ್ಚಿನ ಖರೀದಿ ಆಸಕ್ತಿ ಕಂಡುಬಂದಿತು. ದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಹಣ ತೊಡಗಿಸುತ್ತಿರುವುದೂ ಹೂಡಿಕೆದಾರರಲ್ಲಿ ಉತ್ಸಾಹ ಹೆಚ್ಚಿಸಿದೆ.

₹ 1 ಲಕ್ಷ ಕೋಟಿ ಹೆಚ್ಚಳ
ಬಿಎಸ್‌ಇ ಸಂವೇದಿ ಸೂಚ್ಯಂಕವು 387 ಅಂಶಗಳಷ್ಟು ಏರಿಕೆ ದಾಖಲಿಸಿದ್ದರಿಂದ ಷೇರು ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಮೌಲ್ಯದಲ್ಲಿ ₹ 1 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ.

ಷೇರುಪೇಟೆಯ ಒಟ್ಟು ಮಾರುಕಟ್ಟೆ ಮೌಲ್ಯವು ₹ 145 ಲಕ್ಷ ಕೋಟಿಗೆ ತಲುಪಿದೆ. ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಷೇರುಗಳ ನೇತೃತ್ವದಲ್ಲಿ ಸಂವೇದಿ ಸೂಚ್ಯಂಕದ 30 ಷೇರುಗಳ ಪೈಕಿ 16 ಲಾಭ ಬಾಚಿಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.