ADVERTISEMENT

ಷೇರು ಮರು ಖರೀದಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಷೇರುಗಳ ಮರು ಖರೀದಿಗೆ ಅವಕಾಶ ಮಾಡಿಕೊಡುವ ಮೂಲಕ ಷೇರು ವಿಕ್ರಯ ಪ್ರಕ್ರಿಯೆ ತೀವ್ರಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಕೇಂದ್ರೋದ್ಯಮಗಳ ಷೇರುಗಳ ಮರು ಖರೀದಿಗೆ ಅವಕಾಶ ಮಾಡಿಕೊಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯು ಈ ನಿರ್ಧಾರ ಕೈಗೊಂಡಿತು ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರದ ಅನ್ವಯ, ಸರ್ಕಾರವು ತನ್ನ ಪಾಲನ್ನು ಕೇಂದ್ರೋದ್ಯಮಗಳಿಗೆ ಮಾರಾಟ ಮಾಡಿ ಬಂಡವಾಳ ಸಂಗ್ರಹಿಸಲಿದೆ. ಸರ್ಕಾರಿ ಸ್ವಾಮ್ಯದ ಪ್ರಮುಖ ಉದ್ದಿಮೆ ಸಂಸ್ಥೆಗಳು (ಪಿಎಸ್‌ಯು), ತಮ್ಮಲ್ಲಿ ಇರುವ ಸರ್ಕಾರದ ಪಾಲು ಬಂಡವಾಳವನ್ನು ಮರಳಿ ಖರೀದಿಸಲಿವೆ. ಸರ್ಕಾರದ ಪಾಲು ಬಂಡವಾಳವನ್ನು ಕೇಂದ್ರೋದ್ಯಮಗಳೇ ಮರಳಿ ಖರೀದಿಸಲಿರುವುದರಿಂದ ಅವುಗಳಲ್ಲಿನ ಸರ್ಕಾರದ ಪಾಲು ಕಡಿಮೆಯಾಗಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 40 ಸಾವಿರ ಕೋಟಿಗಳಷ್ಟು ಬಂಡವಾಳ ಸಂಗ್ರಹಿಸಲು ಸರ್ಕಾರ ಗುರಿ ನಿಗದಿಪಡಿಸಿತ್ತು. ಇದುವರೆಗೆ ಸರ್ಕಾರ ಕೇವಲ ರೂ.1,145 ಕೋಟಿಗಳಷ್ಟು ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ.

ಷೇರುವಿಕ್ರಯದಿಂದ ನಿಗದಿತ ಪ್ರಮಾಣದಲ್ಲಿ ಬಂಡವಾಳ ಸಂಗ್ರಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸರ್ಕಾರ ಷೇರು ಮರು ಖರೀದಿಗೆ ಅವಕಾಶ ಮಾಡಿಕೊಡುವುದರ ಜತೆಗೆ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿನ (ಒಎನ್‌ಜಿಸಿ) ತನ್ನ ಪಾಲು ಬಂಡವಾಳದ ಹರಾಜಿನ ಮೂಲಕ ರೂ. 12 ರಿಂದ ರೂ. 13 ಸಾವಿರ ಕೋಟಿಗಳನ್ನು ಸಂಗ್ರಹಿಸಲು ಮುಂದಾಗಿದೆ.
 
ಷೇರು ಮರು ಖರೀದಿ ಕೇಂದ್ರೋದ್ಯಮಗಳ ಹೆಸರುಗಳನ್ನು ಸರ್ಕಾರ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೂ, ಎಂಎಂಟಿಸಿ, ಕೋಲ್ ಇಂಡಿಯಾ, ಎನ್‌ಎಂಡಿಸಿ, ಶಿಪ್ಪಿಂಗ್ ಕಾರ್ಪೊರೇಷನ್, ಎಸ್‌ಟಿಸಿ, ಹಿಂದೂಸ್ತಾನ್ ಕಾಪರ್, ಪವರ್ ಫೈನಾನ್ಸ್, ಆಯಿಲ್ ಇಂಡಿಯಾ ಮತ್ತಿತರ ಕೇಂದ್ರೋದ್ಯಮಗಳು ಈ ಪಟ್ಟಿಯಲ್ಲಿ ಇರುವ ಸಾಧ್ಯತೆಗಳಿವೆ.ಸರ್ಕಾರದ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ, ಮುಂಬೈ ಷೇರುಪೇಟೆಯಲ್ಲಿ ಅನೇಕ ಕೇಂದ್ರೋದ್ಯಮಗಳ ಷೇರುಗಳ ಬೆಲೆಗಳು ಏರಿಕೆ ಕಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.