ADVERTISEMENT

ಸಗಟು ಹಣದುಬ್ಬರ ಏರಿಕೆ

ಆರ್‌ಬಿಐ ಬಡ್ಡಿ ದರ ಕಡಿತ ಸಾಧ್ಯತೆ ಕ್ಷೀಣ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST
ಸಗಟು ಹಣದುಬ್ಬರ ಏರಿಕೆ
ಸಗಟು ಹಣದುಬ್ಬರ ಏರಿಕೆ   

ನವದೆಹಲಿ (ಪಿಟಿಐ): ಈರುಳ್ಳಿ ಸೇರಿದಂತೆ ಪ್ರಮುಖ ತರಕಾರಿಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡ ಹಿನ್ನೆಲೆಯಲ್ಲಿ ಸಗಟು ಬೆಲೆ ಸೂಚ್ಯಂಕ ಆಧರಿಸಿದ (ಡಬ್ಲ್ಯುಪಿಐ) ಹಣದುಬ್ಬರ ದರ ಜೂನ್‌ನಲ್ಲಿ ಶೇ 4.86ಕ್ಕೆ ಏರಿಕೆ ಕಂಡಿದೆ.

ಮೇನಲ್ಲಿ ಶೇ 4.70ರಷ್ಟು `ಡಬ್ಲ್ಯುಪಿಐ' ದಾಖಲಾಗಿತ್ತು. 2012ನೇ ಸಾಲಿನ ಜೂನ್‌ಲ್ಲಿ ಇದು  ಶೇ 7.58ರಷ್ಟಿತ್ತು.

ಹಣಕಾಸು ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶದಂತೆ ಆಹಾರ ಹಣದುಬ್ಬರ ದರ ಶೇ 9.74ಕ್ಕೆ ಏರಿದೆ.  ಒಟ್ಟಾರೆ ಡಬ್ಲ್ಯಪಿಐಗೆ ಶೇ14.34ರಷ್ಟು ಕೊಡುಗೆ ನಿಡುವ ಆಹಾರ ಪದಾರ್ಥಗಳ ಬೆಲೆ  ಮೇನಲ್ಲಿ ಶೇ 8.25ಕ್ಕೆ ಹೆಚ್ಚಳವಾಗಿದೆ. ಈರುಳ್ಳಿ ಶೇ 114ರಷ್ಟು ಮತ್ತು ಇತರೆ  ತರಕಾರಿ ಶೇ 16.47 ರಷ್ಟು ತುಟ್ಟಿಯಾಗಿವೆ.

ಮೇ ತಿಂಗಳಲ್ಲಿ ಶೇ 3.11ರಷ್ಟಿದ್ದ ತಯಾರಿಕಾ ವಲಯದ ಹಣದುಬ್ಬರ ಜೂನ್‌ನಲ್ಲಿ ಶೇ 2.75ಕ್ಕೆ ಇಳಿಕೆ ಕಂಡಿದೆ. ನಾರಿನ ಪದಾರ್ಥಗಳು, ಎಣ್ಣೆಕಾಳು, ಖನಿಜ ಒಳಗೊಂಡ ಆಹಾರೇತರ ಸರಕುಗಳ ಹಣದುಬ್ಬರ ದರ ಶೇ 4.88ರಿಂದ ಶೇ 7.57ಕ್ಕೆ ಏರಿಕೆ ಕಂಡಿದೆ. ಮೊಟ್ಟೆ, ಮಾಂಸ, ಮತ್ತು ಮೀನಿನ ಬೆಲೆ ಶೇ 12.23ರಷ್ಟು ತುಟ್ಟಿಯಾಗಿವೆ. ಬೇಳೆಕಾಳು ಮತ್ತು ಅಕ್ಕಿ ದರದಲ್ಲಿ  ಶೇ 17.18ರಷ್ಟು ಮತ್ತು ಶೇ 19.11ರಷ್ಟು ಹೆಚ್ಚಳವಾಗಿವೆ. ಆಲೂಗೆಡ್ಡೆ ಧಾರಣೆ ಅಲ್ಪ ಕುಸಿತ ಕಂಡಿದೆ. ದ್ವಿದಳ ಧಾನ್ಯಗಳು ಶೇ 1.59ರಷ್ಟು ಅಗ್ಗವಾಗಿವೆ.

ಮೇನಲ್ಲಿ ಶೇ 7.32ರಷ್ಟಿದ್ದ ಇಂಧನ ಮತ್ತು ವಿದ್ಯುತ್ ಹಣದುಬ್ಬರ ದರ ಜೂನ್‌ನಲ್ಲಿ ಶೇ 7.12ಕ್ಕೆ ಕುಸಿತ ಕಂಡಿವೆ.
ಹಣ್ಣು ಮತ್ತು ತರಕಾರಿಗಳು ತುಟ್ಟಿಯಾದ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಗ್ರಾಹಕ ಹಣದುಬ್ಬರ ದರ (ಸಿಪಿಐ) ಶೇ 9.87ಕ್ಕೆ ಏರಿಕೆ ಕಂಡಿದೆ.

ಆರ್‌ಬಿಐ ನೀತಿ
ಹಣದುಬ್ಬರ ಏರಿಕೆ ಕಂಡಿರುವುದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ 30ರಂದು ಪ್ರಕಟಿಸಲಿರುವ  ಮೊದಲ ತ್ರೈಮಾಸಿಕ ಹಣಕಾಸು ನೀತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಕೈಗಾರಿಕಾ ಪ್ರಗತಿ ಗಣನೀಯವಾಗಿ ಕುಸಿರುವುದರಿಂದ     `ಆರ್‌ಬಿಐ' ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸಲಿದೆ ಎಂಬ ವಿಶ್ವಾಸ ಉದ್ಯಮ ವಲಯದಲ್ಲಿದೆ. ಆದರೆ, ಹಣದುಬ್ಬರ ಮತ್ತೆ ಹೆಚ್ಚಿರುವುದು ಈ ಸಾಧ್ಯತೆಯನ್ನು ಕ್ಷೀಣಗೊಳಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2012ರ ಜನವರಿಯಿಂದ ಇಲ್ಲಿಯವರೆಗೆ `ಆರ್‌ಬಿಐ' ರೆಪೊ ದರವನ್ನು ಶೇ 1.30ರಷ್ಟು ಕಡಿತ ಮಾಡಿದೆ. ಆದರೆ, ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಕೇವಲ ಶೇ 0.30ರಷ್ಟು ತಗ್ಗಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.