ADVERTISEMENT

ಸಹಕಾರ ಕ್ಷೇತ್ರದಲ್ಲಿ ವೃತ್ತಿಪರತೆ: ಪ್ರಣವ್ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಗಳು ಕಾಯ್ದೆಗೆ ತಿದ್ದುಪಡಿ ತಂದು ಸಹಕಾರ ಕ್ಷೇತ್ರದಲ್ಲಿ ವೃತ್ತಿಪರತೆ ತರುವಂತೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಲಹೆ ಮಾಡಿದರು.

ದೇಶದಾದ್ಯಂತ ಇರುವ ಆರು ಲಕ್ಷ ಸಹಕಾರ ಸಂಘಗಳು ಸ್ವಾಯತ್ತ, ಸ್ವಾಲಂಬಿ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅಂಗಸಂಸ್ಥೆಗಳಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿ ಪಡಿಸಬೇಕು ಎಂದು ಅವರು ಸೂಚಿಸಿದರು.

ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಶನಿವಾರ ಇಲ್ಲಿ ನಡೆದ ಸಮಾರಂಭದಲ್ಲಿ ಎನ್‌ಸಿಡಿಸಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದ ಸಂಬಂಧ ಕೇಂದ್ರ ಸರ್ಕಾರ ಸಂವಿಧಾನಕ್ಕೆ 97ನೇ ತಿದ್ದುಪಡಿ ಮಾಡಿದೆ. ಅದು 2012ರ ಫೆಬ್ರುವರಿಯಿಂದಲೇ ಜಾರಿಗೆ ಬಂದಿದೆ. ಈ ಕಾಯ್ದೆಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಕೂಡ ತಿದ್ದುಪಡಿ ತರುವಂತೆ 2013ರ ಫೆಬ್ರುವರಿ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದರು.
`ಸಂವಿಧಾನಕ್ಕೆ 97ನೇ ತಿದ್ದುಪಡಿ ತರುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ಮಾಡುವ ನಿಟ್ಟಿನಲ್ಲಿ   ತೆಗೆದುಕೊಂಡಿರುವ ದೊಡ್ಡ ಹೆಜ್ಜೆ' ಎಂದೂ ಅವರು ಪ್ರಶಂಸಿಸಿದರು.

ವಸತಿ ಸಮಸ್ಯೆ ಪರಿಹಾರಕ್ಕೆ ಒತ್ತು
ಬ್ಯಾಂಕುಗಳು ಹಾಗೂ ಖಾಸಗಿ ವಲಯ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವ ಮೂಲಕ ದೇಶದ ವಸತಿ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಒತ್ತಿ ಹೇಳಿದ್ದಾರೆ.

` 2012ರಲ್ಲಿ 18.78 ಮಿಲಿಯ ವಸತಿ ಕೊರತೆ ಕಂಡುಬಂದಿದ್ದು ಇದರಲ್ಲಿ ಶೇ 95ರಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಕಡಿಮೆ ಆದಾಯ ಹೊಂದಿದವರೇ ಆಗಿದ್ದಾರೆ ಎಂದು 2011ರ ಜನಗಣತಿ ಆಧಾರದಲ್ಲಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ ಸ್ಥಾಪಿಸಿದ್ದ  ಸಮಿತಿ ತಿಳಿಸಿದೆ' ಎಂದು ಅವರು ತಿಳಿಸಿದರು.

ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಸಮಾವೇಶವದಲ್ಲಿ ಮಾತನಾಡುತ್ತಿದ್ದ ಮುಖರ್ಜಿ, ನಗರ ಜನಸಂಖ್ಯೆಯ ಶೇ 25ರಷ್ಟು ಮಂದಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.

ಕೈಗೆಟಕುವ ಮನೆ ನಿಮಾರ್ಣ
ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ಮೌಲ್ಯದ ವಸತಿಯನ್ನು ಒದಗಿಸಿಕೊಡುವ ಸಲುವಾಗಿ ತಮ್ಮ ಸಚಿವಾಲಯದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಕೈಗೆಟಕುವ ದರದ ಮನೆಗಳನ್ನು ಸೇರಿಸಲಾಗುವುದು ಎಂದು ವಸತಿ ಮತ್ತು ನಗರ ಬಡತನ ನಿರ್ಮೂಲನ ಸಚಿವ ಅಜಯ್ ಮಾಕನ್ ತಿಳಿಸಿದ್ದಾರೆ.

ಸಚಿವಾಲಯ ಕೈಗಿತ್ತಿಕೊಂಡಿರುವ ಎಲ್ಲಾ ಯೋಜನೆಗಳು ಜನರಿಗೆ ತಲುಪುವಲ್ಲಿ ಸಚಿವಾಲಯ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು   ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT