ಮುಂಬೈ(ಪಿಟಿಐ): ಸರ್ಕಾರ ಬಾಹ್ಯ ಮಾರ್ಗಗಳ ಮೂಲಕ ಸಾಂದರ್ಭಿಕವಾಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಮೇಲೆ `ಮಾಲೀಕತ್ವದ ಹಕ್ಕು~ ಚಲಾಯಿಸುವುದು ಸರಿಯಾದ ಕ್ರಮವಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ.
`ಈ ರೀತಿ ಸಾಂದರ್ಭಿಕ ಹಕ್ಕು ಚಲಾಯಿಸುವುದರ ಬದಲು ಸರ್ಕಾರ ನೇರವಾಗಿ ಮಾದರಿ ಕಾರ್ಪೊರೇಟ್ ಆಡಳಿತ ಪ್ರದರ್ಶಿಸಲಿ~ ಎಂದು `ಆರ್‌ಬಿಐ~ ಸಲಹೆ ನೀಡಿದೆ.`ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹೊರತುಪಡಿಸಿ ಇತರೆ ವಾಣಿಜ್ಯ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಮೇಲಿನ ಮಾಲೀಕತ್ವದ ಹಕ್ಕನ್ನು ಸರ್ಕಾರ ಹೇಗೆ ನಿರ್ವಹಿಸುತ್ತಿದೆ ಎನ್ನುವುದು ಸದ್ಯದ ಪ್ರಶ್ನೆ ಎಂದು `ಆರ್‌ಬಿಐ~ ಗವರ್ನರ್ ಡಿ.ಸುಬ್ಬರಾವ್ ಇಲ್ಲಿ ನಡೆದ `ನಬಾರ್ಡ್~ನ 30ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಗಮನ ಸೆಳೆದರು.
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸೇರಿದಂತೆ 21 ಪ್ರಮುಖ ಬ್ಯಾಂಕುಗಳ ಗರಿಷ್ಠ ಮಾರುಕಟ್ಟೆ ಪಾಲನ್ನು ಸರ್ಕಾರ ಹೊಂದಿದೆ. `ಎಲ್‌ಐಸಿ~ ಜತೆಗೆ ಇನ್ನೂ ನಾಲ್ಕು ಸಾಮಾನ್ಯ ವಿಮಾ ಸಂಸ್ಥೆಗಳ ಮಾಲೀಕತ್ವವನ್ನೂ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ `ಸಾಂದರ್ಭಿಕ ಮಾಲೀಕತ್ವ ಹಕ್ಕು~ ಚಲಾಯಿಸುವುದು ಉತ್ತಮ ಕಾರ್ಪೊರೇಟ್ ಆಡಳಿತಕ್ಕೆ ಮಾದರಿ ಅಲ್ಲ~ ಎಂದು ಸುಬ್ಬರಾವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.